ಕ್ರೀಡೆ

2012ರಲ್ಲಿ ಆತನಿಗಿದ್ದ ದೌರ್ಬಲ್ಯ ಇನ್ನೂ ಇದೆ; Virat Kohli ಕುರಿತಾದ ಶಾಕಿಂಗ್​ ವಿಚಾರ ರಿವೀಲ್​ ಮಾಡಿದ ಮಾಜಿ ಸ್ಟಾರ್ ಆಟಗಾರ

ನವದೆಹಲಿ: 12 ವರ್ಷದ ಬಳಿಕ ಟೀಮ್​ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್​ ಕೊಹ್ಲಿ (Virat Kohli) ರಣಜಿ ಟೂರ್ನಿಯಲ್ಲಿ ಆಡುತ್ತಿದ್ದು, ರೈಲ್ವೇಸ್​ ವಿರುದ್ಧದ ಪಂದ್ಯದಲ್ಲಿ ಅವರು ದೆಹಲಿ ಪರ ಆಡುತ್ತಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು, ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿದೆ. ಮೊದಲ ದಿನ ವಿರಾಟ್​ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗದ ಕಾರಣ ಕೊಹ್ಲಿಯನ್ನು ನೋಡಲು ಬಂದಿದ್ದ ಅಭಿಮಾನಿಗಳು ಸಪ್ಪುಮೋರೆ ಹಾಕಿಕೊಂಡು ಮೈದಾನದಿಂದ ತೆರಳಿದ್ದಾರೆ.

ಫಾರ್ಮ್​ಗೆ ಮರಳಲು 12 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್ ಟೂರ್ನಿ ಆಡುತ್ತಿರುವ ವಿರಾಟ್​ ಕೊಹ್ಲಿ (Virat Kohli) ಕುರಿತು ಟೀಮ್​ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್​ ಕೈಫ್ ಮಾತನಾಡಿದ್ದು, ವಿರಾಟ್​ ಔಟಾಗುತ್ತಿರುವ ರೀತಿಯನ್ನು ಪ್ರಮುಖವಾಗಿ ಉಲ್ಲೇಖಿಸಿ ಮಾತನಾಡಿದ್ದಾರೆ. 12 ವರ್ಷಗಳಿಂದ ಕೊಹ್ಲಿ ಇದೇ ರೀತಿ ಔಟಾಗುತ್ತಿರುವ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮೊಹಮ್ಮದ್​ ಕೈಫ್​, 2012ರಲ್ಲಿ ದೆಹಲಿ ಹಾಗೂ ಉತ್ತರಪ್ರದೇಶ ವಿರುದ್ಧ ರಣಜಿ ಪಂದ್ಯ ನಡೆಯಿತು. ಉತ್ತರಪ್ರದೇಶ ಪರ ಸುರೇಶ್ ರೈನಾ, ಕೈಫ್, ಭುವನೇಶ್ವರ್ ಕುಮಾರ್, ಪ್ರವೀಣ್ ಕುಮಾರ್ ಇದ್ದರು. ದೆಹಲಿ ಪರ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಆಶಿಶ್ ನೆಹ್ರಾ, ಇಶಾಂತ್ ಶರ್ಮಾ ಆಡುತ್ತಿದ್ದರು. ಇದು ಪರೀಕ್ಷೆಯ ಸಮಯವಾಗಿತ್ತು. ಕೊಹ್ಲಿ ಕವರ್​ಡ್ರೈವ್​ ಮಾಡಲು ಹೋಗಿ ಬೇಗನೆ ಔಟಾದರು. ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲೂ ಇದೇ ರೀತಿ ಔಟಾಗಿದ್ದನ್ನು ನಾವು ನೋಡಬಹುದಾಗಿದೆ. 

ಔಟ್​ಸೈಡ್​ ಆಫ್​ ಸ್ಟಂಪ್​ ಚೆಂಡುಗಳನ್ನು ಎದುರಿಸುವಾಗ ವಿರಾಟ್​ಕೊಹ್ಲಿ (Virat Kohli) ದೌರ್ಬಲ್ಯವನ್ನು ಹೊಂದಿದ್ದರು ಆತ ರನ್​ ಗಳಿಸಿರುವ ರೀತಿ ನಿಜಕ್ಕೂ ಶ್ಲಾಘನೀಯವಾಗಿದೆ. ರಣಜಿಯಲ್ಲಿ ಆಡುತ್ತಿರುವುದರಿಂದ ವಿರಾಟ್​ಗೆ ಹೆಚ್ಚು ಉಪಯೋಗವಾಗುತ್ತದೆ. ದೆಹಲಿ ಪರ ಕಣಕ್ಕಿಳಿದಿರುವ ವಿರಾಟ್ ಹೆಚ್ಚು ರನ್ ಗಳಿಸಲಿ ಎಂದು ಟೀಮ್​ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್​ ಕೈಫ್ ಆಶಿಸಿದ್ದಾರೆ.