ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ (Team India) ಹಾಗೂ ನ್ಯೂಜಿಲೆಂಡ್ (Newzealand) ನಡುವೆ ಜರುಗಿದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು ಸೋಲು ಕಂಡಿದ್ದು, ಪ್ರವಾಸಿಗರ ದಿಟ್ಟ ಆಟಕ್ಕೆ ತಲೆ ಬಾಗಿದ್ದಾರೆ. 4331 ದಿನಗಳು ಅಂದರೆ 12 ವರ್ಷಗಳ ಬಳಿಕ ತವರು ನೆಲದಲ್ಲಿ ಭಾರತ ಟೆಸ್ಟ್ ಸರಣಿ (Test Series) ಸೋತಿದ್ದು, ಈ ವಿಚಾರ ಭಾರೀ ಮುಖಭಂಗಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಮೂಲಕ ನ್ಯೂಜಿಲೆಂಡ್ ತಂಡವು ಐತಿಹಾಸಿಕ ದಾಖಲೆ ಬರೆದಿದ್ದು, ಸರಣಿ ಸೋಲಿನ ಕುರಿತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಮಾತನಾಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿರುವ ರೋಹಿತ್ ಶರ್ಮ (Rohit Sharma), ನಾವು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ. ನ್ಯೂಜಿಲೆಂಡ್ನವರು (NewZelanad) ನಮಗಿಂತ ಚೆನ್ನಾಗಿ ಆಡಿದರು. ಎದುರಾಳಿ ತಂಡದವರು ಹಾಕಿದ ಕೆಲವು ಸವಾಲುಗಳನ್ನು ಅರಿತುಕೊಂಡು ಎದುರಿಸುವಲ್ಲಿ ನಾವು ಎಡವಿದ್ದೇವೆ. ವಿಕೆಟ್ ಹೇಗೆ ತೆಗೆದೆವೋ ಅದೇ ರೀತಿ ನಾವು ಬ್ಯಾಟಿಂಗ್ ಮಾಡಬೇಕಿತ್ತು. ಆದರೆ, ನಾವು ವಿಫಲರಾದೆವು.
ಅವರು ಮೂರನೇ ದಿನದಾಟ ಆರಂಭಿಸಿದಾಗ 3 ವಿಕೆಟ್ ನಷ್ಟಕ್ಕೆ 250 ರನ್ ಕಳೆದುಕೊಂಡಿದ್ದರು. ಆ ನಂತರ ನಾವು ಅವರನ್ನು 259ಕ್ಕೆ ಆಲೌಟ್ ಮಾಡಿದೆವು. ನಾವು ನಿರೀಕ್ಷಿಸಿದ ಮಟ್ಟದಲ್ಲಿ ಪಿಚ್ ನಮಗೆ ಸಹಕರಿಸಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಸ್ವಲ್ಪ ಹತ್ತಿರವಾಗುತ್ತಿದ್ದರೆ ವಿಷಯಗಳು ಸ್ವಲ್ಪ ವಿಭಿನ್ನವಾಗಿರುತ್ತಿದ್ದವು. ನಾವು ವಾಂಖೆಡೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ ಮತ್ತು ಮೂರನೇ ಟೆಸ್ಟ್ ಅನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ಇದು ತಂಡದ ಸಾಮೂಹಿಕ ವೈಫಲ್ಯವಾಗಿದ್ದು, ಆವು ಬ್ಯಾಟರ್ ಅಥವಾ ಬೌಲರ್ಗಳನ್ನು ದೂಷಿಸುವ ಅಗತ್ಯವಿಲ್ಲ. ಉತ್ತಮ ಉದ್ದೇಶ, ವಿಧಾನ ಹಾಗೂ ಆಲೋಚನೆಗಳೊಂದಿಗೆ ನಾವು ಮುಂದಿನ ಪಂದ್ಯವನ್ನು ಗೆಲ್ಲುತ್ತೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ (NewZealand) ತಂಡವು ವಾಷಿಂಗ್ಟನ್ ಸುಂದರ್. ಆರ್. ಅಶ್ವಿನ್ ಆಫ್ಸ್ಪಿನ್ ದಾಳಿಗೆ ನಲುಗಿ 259 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ (Team India) 156 ರನ್‌ಗಳಿಗೆ ಆಲೌಟ್ ಆಗಿತ್ತು. 103 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವು ನಾಯಕ ಟಾಮ್ ಲಾಥಮ್ (86 ರನ್, 133 ಎಸೆತ, 10 ಬೌಂಡರಿ) ದಿಟ್ಟ ಬ್ಯಾಟಿಂಗ್ ಫಲವಾಗಿ 255 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 359 ರನ್ಗಳ ಗುರಿ ನೀಡಿತು.
ಗುರಿ ಬೆನ್ನತ್ತಿದ್ದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಿವೀಸ್ ಬೌಲರ್ಗಳು (NewZealand) ಪೆವಿಲಿಯನ್ ದಾರಿ ತೋರಿಸಿದರು. ಮೊದಲ ಇನ್ನಿಂಗ್ಸ್ನಂತೆ ಎರಡನೇ ಇನ್ನಿಂಗ್ಸ್‌ನಲ್ಲೂ ಬ್ಯಾಟ್ಸ್ಮನ್ಗಳು ಕೈಕೊಟ್ಟ ಪರಿಣಾಮ ಟೀಮ್ ಇಂಡಿಯಾ ಸೋಲಿಗೆ ಕೊರಳೊಡ್ಡಬೇಕಾಯಿತು. ತಂಡದ ಪರ ರವೀಂದ್ ಜಡೇಜಾ 42 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
ನ್ಯೂಜಿಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲೂ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಯಾಂಟ್ನರ್ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಮುಖ 7 ವಿಕೆಟ್ ಉರುಳಿಸಿದ್ದ ಸ್ಯಾಂಟ್ನರ್, ಎರಡನೇ ಇನ್ನಿಂಗ್ಸ್‌ನಲ್ಲೂ 6 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಕಿವೀಸ್ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.