ಕ್ರೀಡೆ

ವಯಸ್ಸಾದ್ರೂ ಕಡಿಮೆಯಾಗಿಲ್ಲ ಡಿವಿಲಿಯರ್ಸ್​ ಖದರ್​: ಎಬಿಡಿ ಹಿಡಿದ ಕ್ಯಾಚ್​ ನೋಡಿ ಹುಬ್ಬೇರಿಸಿದ ನೆಟ್ಟಿಗರು! AB de Villiers

AB de Villiers : ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ನಂತರವೂ ತಮ್ಮ ಚಾರ್ಮ್​ ಹಾಗೂ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.

2025ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ನಲ್ಲಿ ತಮ್ಮ ಬ್ಯಾಟಿಂಗ್​ನಿಂದ ಮಾತ್ರವಲ್ಲದೆ, ಮಿಂಚಿನ ಫೀಲ್ಡಿಂಗ್‌ನಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ. 41ನೇ ವಯಸ್ಸಿನಲ್ಲಿ ಡಿವಿಲಿಯರ್ಸ್ ಬೌಂಡರಿ ಲೈನ್ ಬಳಿ ಕ್ಯಾಚ್​ ಹಿಡಿಯುವಾಗ ಮತ್ತೊಮ್ಮೆ ತಮ್ಮ ಸಾಹಸ ಪ್ರದರ್ಶಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಿನ್ನೆ (ಜುಲೈ 22) ನಡೆದ ಪಂದ್ಯದಲ್ಲಿ ಚಾಂಪಿಯನ್ಸ್ ದಕ್ಷಿಣ ಆಫ್ರಿಕಾ, ಮೊದಲು ಬ್ಯಾಟಿಂಗ್ ಮಾಡಿತು. ಎಬಿ ಡಿವಿಲಿಯರ್ಸ್ (ಅಜೇಯ 63 ರನ್​, 30 ಎಸೆತ, 3 ಬೌಂಡರಿ, 4 ಸಿಕ್ಸರ್) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸುವ ಮೂಲ ದಕ್ಷಿಣ ಆಫ್ರಿಕಾ ಬೃಹತ್​ ಮೊತ್ತ ಕಲೆಹಾಕಿತು. ಭಾರತೀಯ ಬೌಲರ್‌ಗಳ ಪರವಾಗಿ ಯೂಸುಫ್ ಪಠಾಣ್ ಮತ್ತು ಪಿಯೂಷ್ ಚಾವ್ಲಾ ತಲಾ ಎರಡು ವಿಕೆಟ್ ಪಡೆದರೆ, ಅಭಿಮನ್ಯು ಮಿಥುನ್ ಒಂದು ವಿಕೆಟ್ ಪಡೆದರು.

ನಂತರ ಟೀಮ್​ ಇಂಡಿಯಾ ಚೇಸಿಂಗ್‌ನಲ್ಲಿ ಹೀನಾಯವಾಗಿ ವಿಫಲವಾಯಿತು. ಸ್ಟುವರ್ಟ್ ಬಿನ್ನಿ (ಔಟಾಗದೆ 37 ರನ್​, 39 ಎಸೆತ, 3 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಆರಂಭಿಕರಾದ ರಾಬಿನ್ ಉತ್ತಪ್ಪ (2) ಹಾಗೂ ಶಿಖರ್ ಧವನ್ (1) ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಅಲ್ಲದೆ, ಅಂಬಟಿ ರಾಯುಡು (0), ಸುರೇಶ್ ರೈನಾ (16), ಯೂಸುಫ್ ಪಠಾಣ್ (5) ಮತ್ತು ಇರ್ಫಾನ್ ಪಠಾಣ್ (10) ತೀವ್ರ ನಿರಾಸೆ ಮೂಡಿಸಿದರು.

ಪ್ರಮುಖ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ಭಾರತ 18.2 ಓವರ್‌ಗಳಲ್ಲಿ 111 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ, ಮೈದಾನದಲ್ಲಿನ ಫ್ಲಡ್‌ಲೈಟ್‌ಗಳ ಸಮಸ್ಯೆ ಇತ್ತು. ಸ್ವಲ್ಪ ಸಮಯದವರೆಗೆ ಸಮಸ್ಯೆ ಬಗೆಹರಿಯದ ನಂತರ, ಅಂಪೈರ್‌ಗಳು ಡಕ್‌ವರ್ತ್-ಲೂಯಿಸ್ ವಿಧಾನವನ್ನು ಬಳಸಿಕೊಂಡು ದಕ್ಷಿಣ ಆಫ್ರಿಕಾವನ್ನು 88 ರನ್‌ಗಳಿಂದ ಜಯಗಳಿಸಿದೆ ಎಂದು ಘೋಷಿಸಿದರು.

ಡಿವಿಲಿಯರ್ಸ್ ಅವರ ಅದ್ಭುತ ಫೀಲ್ಡಿಂಗ್

ಎಬಿ ಡಿವಿಲಿಯರ್ಸ್ 41 ವರ್ಷ ವಯಸ್ಸಿನಲ್ಲೂ ತಮ್ಮ ಫೀಲ್ಡಿಂಗ್‌ನಿಂದ ಎಲ್ಲರ ಗಮನ ಸೆಳೆದರು. ಇಮ್ರಾನ್ ತಾಹಿರ್ ಭಾರತೀಯ ಇನ್ನಿಂಗ್ಸ್‌ನ 8ನೇ ಓವರ್ ಅನ್ನು ಬೌಲ್ ಮಾಡಿದರು. ಈ ಓವರ್‌ನ ಮೊದಲ ಎಸೆತದಲ್ಲಿ ಯೂಸುಫ್ ಪಠಾಣ್ ಬೃಹತ್ ಶಾಟ್ ಹೊಡೆದರು. ಈ ವೇಳೆ ಬೌಂಡರಿ ಗೆರೆಯತ್ತ ಓಡುತ್ತಿದ್ದ ಡಿವಿಲಿಯರ್ಸ್ ಡೈವ್ ಮಾಡಿ ಕ್ಯಾಚ್ ಹಿಡಿದರು. ಆದರೆ, ಅದು ಬೌಂಡರಿ ಗೆರೆಯನ್ನು ಮೀರಿ ಹೋಗುತ್ತಿರುವುದನ್ನು ಗಮನಿಸಿದ ಡಿವಿಲಿಯರ್ಸ್​, ಚೆಂಡನ್ನು ಮೈದಾನದಲ್ಲಿದ್ದ ಫೀಲ್ಡರ್ ಸರೆಲ್ ಎರ್ವೆ ಕಡೆಗೆ ಎಸೆದರು. ಈ ವೇಳೆ ಸರೆಲ್ ಡೈವ್ ಮಾಡಿ ಚೆಂಡನ್ನು ಹಿಡಿದರು. ಇದರೊಂದಿಗೆ ಯೂಸುಫ್ ಔಟಾದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಡಿವಿಲಿಯರ್ಸ್ ಮೇಲೆ ಹೊಗಳಿಕೆಯ ಸುರಿಮಳೆಗೈಯುತ್ತಿದ್ದಾರೆ. (ಏಜೆನ್ಸೀಸ್​)