ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್ಗಳ ಸೋಲು ಕಾಣುವ ಮೂಲಕ ಐಪಿಎಲ್ನಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ. ಏಪ್ರಿಲ್ 21ರಂದು ಕೋಲ್ಕತ ನೈಟ್ರೈಡರ್ಸ್ ವಿರುದ್ಧ ಒಂದು ರನ್ಗಳ ವಿರೋಚಿತ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದ್ದ ಆರ್ಸಿಬಿ ಮೇ 22ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೊನೆಗೊಂಡಿದೆ. ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಕಂಡುಬಂದ ದೃಶ್ಯ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಗಳನ್ನು ಭಾವುಕವಾಗಿಸಿದೆ.
ಐಪಿಎಲ್ ಪ್ರಾರಂಭವಾದಾಗಿನಿಂದಲೂ ಆಡುತ್ತಿರುವ ಆರ್ಸಿಬಿ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಪ್ರತಿ ವರ್ಷ ಟೂರ್ನಿ ಆರಂಭಕ್ಕೂ ಮುನ್ನ ಈ ಬಾರಿ ಕಪ್ ನಮ್ಮದೆ ಎಂಬ ಭರವಸೆಯಿಂದ ಕಾದು ಕುಳಿತಿರುತ್ತಾರೆ. ಆದರೆ ಪಂದ್ಯಾವಳಿ ಮುಂದುವರೆದಂತೆ, ಎಲ್ಲಾ ಭರವಸೆಗಳು ಹುಸಿಯಾಗುತ್ತವೆ. ಈ ಬಾರಿಯೂ ಅಂಥದ್ದೇ ಘಟನೆ ನಡೆದಿದೆ. ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ್ದು, ಈ ಬಾರಿ ಎಲ್ಲರನ್ನೂ ಮಣಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಶತಕೋಟಿ ಅಭಿಮಾನಿಗಳ ಹೆಬ್ಬಯಕೆಗೆ ಈ ಬಾರಿಯೂ ನೋವಿನ ತೆರೆ ಬಿದ್ದಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲಿನ ಬಳಿಕ ಆರ್ಸಿಬಿ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವನಾತ್ಮಕ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಪಂದ್ಯ ಮುಗಿದ ಬಳಿಕ ತಂಡದ ಎಲ್ಲಾ ಆಟಗಾರರು ಹತಾಶೆ ಮತ್ತು ನಿರಾಶೆಯಿಂದ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿರುವುದನ್ನು ನೋಡಬಹುದಾಗಿದೆ. ಎಲ್ಲಾ ಆಟಗಾರರು ದುಃಖದಲ್ಲಿರುವುನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಭಾವುಕರಾಗಿದ್ದಾರೆ.
ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 8 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 172 ಗಳಿಸಲು ಶಕ್ತವಾಯಿತು. 173 ರನ್ಗಳ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು 19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಕ್ವಾಲಿಫಯರ್-2 ಪ್ರವೇಶಿಸಿದೆ.