ಕ್ರೀಡೆ

ಹಾರ್ದಿಕ್​ರಿಂದ ನಾಯಕತ್ವ ಕಸಿದುಕೊಂಡ್ರಾ ರೋಹಿತ್​ ಶರ್ಮಾ?; ಇಲ್ಲಿದೆ ಪುರಾವೆ

ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 43ನೇ ಐಪಿಎಲ್​ ಪಂದ್ಯದಲ್ಲಿ ರಿಷಭ್​ ಪಂತ್​ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಹಾರ್ದಿಕ್​ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್​ ವಿರುದ್ಧ 10 ರನ್​ಗಳ ಗೆಲುವು ಸಾಧಿಸಿದೆ. ಹಾಲಿ ಟೂರ್ನಿಯಲ್ಲಿ 6ನೇ ಸೋಲು ಕಂಡ ಮುಂಬೈ ಇಂಡಿಯನ್ಸ್​ ತೀವ್ರ ಟೀಕೆಗೆ ಗುರಿಯಾಗಿದ್ದು, ಹಾರ್ದಿಕ್​ ಬದಲಿಗೆ ರೋಹಿತ್​ರನ್ನು ಮತ್ತೊಮ್ಮೆ ನಾಯಕನನ್ನಾಗಿ ನೇಮಿಸುವಂತೆ ಹಲವರು ಆಗ್ರಹಿಸುತ್ತಿದ್ದಾರೆ.

ಹಾರ್ದಿಕ್​ ಪಾಂಡ್ಯರನ್ನು ನಾಯಕನನ್ನಾಗಿ ನೇಮಿಸಿದ ಬಳಿಕ ಅಭಿಮಾನಿ ಹಾಗೂ ಕ್ರೀಡಾ ವಲಯದಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಮುಂಬೈ ಇಂಡಿಯನ್ಸ್​ ಇದೀಗ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಮತ್ತೊಮ್ಮೆ ಟ್ರೋಲ್​ಗೆ ಗುರಿಯಾಗಿದೆ. ಶನಿವಾರದ ಪಂದ್ಯದಲ್ಲೂ ಹಾರ್ದಿಕ್​ ಪಾಂಡ್ಯರ ಕಳಪೆ ಪ್ರದರ್ಶನ ಮುಂದುವರೆದಿದ್ದು, ಮತ್ತೊಮ್ಮೆ ರೋಹಿತ್​ರನ್ನು ನಾಯಕನನ್ನಾಗಿ ನೇಮಿಸುವಂತೆ ಆಗ್ರಹ ಕೇಳಿ ಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಡೆಲ್ಲಿ ಬ್ಯಾಟ್ಸ್​ಮನ್​ಗಳು ಮುಂಬೈ ಬೌಲರ್​ಗಳನ್ನು ಲೀಲಾಜಾಲವಾಗಿ ದಂಡಿಸುವ ವೇಳೆ ಮಾಜಿ ನಾಯಕ ರೋಹಿತ್​ ಶರ್ಮಾ ಫೀಲ್ಡ್​ ಸೆಟ್​ ಮಾಡಲು ಶುರು ಮಾಡುತ್ತಾರೆ. ಈ ವೇಳೆ ಬೌಂಡರಿ ಲೈನ್​ ಬಳಿ ಇದ್ದ ನಾಯಕ ಹಾರ್ದಿಕ್​ ಪಾಂಡ್ಯ ಸುಮ್ಮನೆ ಅದನ್ನು ನೋಡುತ್ತ ನಿಂತಿರುತ್ತಾರೆ. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ರನ್​ ವೇಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗುವುದನ್ನು ನೋಡಬಹುದಾಗಿದೆ.

ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ರೋಹಿತ್​ ಶರ್ಮಾರನ್ನು ಹಾಡಿ ಹೊಗಳಿದ್ದಾರೆ. ಹಾರ್ದಿಕ್​ ಪಾಂಡ್ಯರ ಬದಲಿಗೆ ರೋಹಿತ್​ರನ್ನು ತಂಡದ ನಾಯಕನನ್ನಾಗಿ ನೇಮಿಸಿ ಈಗಲೂ ಕಾಲ ಮಿಂಚಿಲ್ಲ. ಮುಂಬೈ ಇಂಡಿಯನ್ಸ್​ ಮಾಲೀಕರು ಮತ್ತೊಮ್ಮೆ ಯೋಚಿಸುವುದು ಸೂಕ್ತ ಎಂದು ನೆಟ್ಟಿಗರು ಕಮೆಂಟ್​ ಹಾಕುತ್ತಿದ್ದಾರೆ.