ಇಸ್ಲಮಾಬಾದ್: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ತಂಡದ ನಾಯಕ ಬಾಬರ್ ಅಜಾಮ್ ಕಳಪೆ ಫಾರ್ಮ್ನಲ್ಲಿದ್ದಾರೆ. ಮೂರು ಪಂದ್ಯದಲ್ಲಿ ಕ್ರಮವಾಗಿ 0, 4 ಹಾಗೂ 4 ರನ್ಗಳನ್ನು ಮಾತ್ರ ಗಳಿಸಿದ್ದಾರೆ. ಪಾಕ್ ತಂಡ ಸೆಮಿಫೈನಲ್ ಪ್ರವೇಶ ಪಡೆಯದೆ ಸೂಪರ್ 12 ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಗುಳಿಯಲು ಬಾಬರ್ ಕಳಪೆ ಪ್ರದರ್ಶನವೇ ಕಾರಣವಾಗಿದೆ.
ಕಳೆದ ಭಾನುವಾರ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಬಾಬರ್ ಕುರಿತು ಟ್ವೀಟ್ ಮಾಡಿ, "ಇದು ಕೂಡ ಸರಿದು ಹೋಗುತ್ತವೆ. ದೃಢವಾಗಿರಿ" ಎಂದಿದ್ದರು. ಇದೇ ಮಾತನ್ನು ಬಾಬರ್ ಈ ವರ್ಷದ ಆರಂಭದಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ನಲ್ಲಿದ್ದಾಗ ಬಾಬರ್ ಟ್ವೀಟ್ ಮಾಡಿದ್ದರು. ಯಥಾವತ್ ಬಾಬರ್ ಟ್ವೀಟ್ ಅನ್ನು ನಕಲು ಮಾಡಿ, ಬಾಬರ್ಗೆ ಮಿಶ್ರಾ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.
ಈ ಬಗ್ಗೆ ಪಾಕ್ನ ಸಾಮಾ ಟಿವಿ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಪಾಕ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ, ನೀವು ತೆಗೆದುಕೊಳ್ಳುತ್ತಿರುವ ಹೆಸರು ಅಮಿತ್ ಮಿಶ್ರಾ, ಅವರು ಕೂಡ ಭಾರತಕ್ಕಾಗಿ ಆಡಿದ್ದಾರೆಯೇ? ಅವರೇನು ಸ್ಪಿನ್ನರ್ ಅಥವಾ ಬ್ಯಾಟ್ಸ್ಮನ್ ಆ ಎಂದು ವ್ಯಂಗ್ಯವಾಡಿದ್ದಾರೆ.
ಮಿಶ್ರಾ ಅವರು ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಆಡಿದ ಎಡಗೈ ಸ್ಪಿನ್ನರ್ ಎಂದು ಆ್ಯಂಕರ್ ಅಫ್ರಿದಿಗೆ ನೆನಪಿಸಿದಾಗ, ಏನು ಸಮಸ್ಯೆಯಿಲ್ಲ, ನಾವು ಮುಂದುವರಿಯೋಣ ಎಂದು ಪ್ರತಿಕ್ರಿಯೆ ನೀಡಿದರು.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕೇವಲ 2 ಅಂಕಗಳನ್ನು ಗಳಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಇನ್ನೆರೆಡು ಪಂದ್ಯ ಬಾಕಿ ಇದೆ. ಆದರೆ, ಪಾಕ್ನ ಸೆಮಿಫೈನಲ್ ಕನಸು ಈಗಾಗಲೇ ನುಚ್ಚು ನೂರಾಗಿದೆ. (ಏಜೆನ್ಸೀಸ್)