ಕ್ರೀಡೆ

ವಾರ್ನರ್ ಬಳಗದ ಅಬ್ಬರಕ್ಕೆ ಬೆದರಿದ ಹಾಲಿ ಚಾಂಪಿಯನ್: ಪ್ಲೇಆಫ್​ ಹಂತಕ್ಕೇರಿದ ಸನ್‌ರೈಸರ್ಸ್‌

ಶಾರ್ಜಾ: ಸರ್ವಾಂಗೀಣ ನಿರ್ವಹಣೆಯಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಮೇಲುಗೈ ಸಾಧಿಸಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-13ರಲ್ಲಿ ನಾಲ್ಕನೇ ತಂಡವಾಗಿ ಪ್ಲೇಆ್ ಹಂತಕ್ಕೇರಿತು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ನಿರ್ಣಾಯಕ ಹೋರಾಟದಲ್ಲಿ ಸನ್‌ರೈಸರ್ಸ್‌ ತಂಡ 10 ವಿಕೆಟ್‌ಗಳಿಂದ ಜಯ ದಾಖಲಿಸಿತು. ಇದರೊಂದಿಗೆ ಡೇವಿಡ್ ವಾರ್ನರ್ ಬಳಗದ ಸೋಲಿಗೆ ಕಾಯುತ್ತಿದ್ದ ಕೋಲ್ಕತ ನೈಟ್ ರೈಡರ್ಸ್‌ ನಿರಾಸೆ ಅನುಭವಿಸಿತು. ಹ್ಯಾಟ್ರಿಕ್ ಗೆಲುವು ದಾಖಲಿಸಿದ ಸನ್‌ರೈಸರ್ಸ್‌, ರನ್‌ರೇಟ್ ಲೆಕ್ಕಾಚಾರದಲ್ಲಿ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ, ಸಂದೀಪ್ ಶರ್ಮ (34ಕ್ಕೆ 3), ಶಾಬಾಜ್ ನದೀಂ (19ಕ್ಕೆ 2) ಹಾಗೂ ಜೇಸನ್ ಹೋಲ್ಡರ್ (25ಕ್ಕೆ 2) ಮಾರಕ ದಾಳಿಗೆ ನಲುಗಿ 8 ವಿಕೆಟ್‌ಗೆ 149 ರನ್ ಪೇರಿಸಿತು. ಪ್ರತಿಯಾಗಿ ಡೇವಿಡ್ ವಾರ್ನರ್ (85*ರನ್, 58 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ವೃದ್ಧಿಮಾನ್ ಸಾಹ (58*ರನ್, 45 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಫಲವಾಗಿ 17.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 151 ರನ್ ಗಳಿಸಿ ಗೆಲುವಿನ ನಗೆ ನೀರಿತು.