ಕ್ರೀಡೆ

ಏಕದಿನ ರ್‍ಯಾಂಕಿಂಗ್‌ನಲ್ಲಿ‌ ಅಗ್ರಸ್ಥಾನಕ್ಕೆ ಮರಳಿದ ಆಸೀಸ್: ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ವಾರ್ನರ್

ಬ್ಲೋಮ್‌ಫಾಂಟೇನ್ (ದಕ್ಷಿಣ ಆಫ್ರಿಕಾ): ಎಡಗೈ ಆರಂಭಿಕ ಡೇವಿಡ್ ವಾರ್ನರ್ ( 106 ರನ್, 93 ಎಸೆತ, 12 ಬೌಂಡರಿ, 3 ಸಿಕ್ಸರ್) ಮತ್ತು ಮಾರ್ನಸ್ ಲಬುಶೇನ್ (124 ರನ್, 99 ಎಸೆತ, 19 ಬೌಂಡರಿ, 1 ಸಿಕ್ಸರ್) ಭರ್ಜರಿ ಶತಕಗಳ ಬಲದಿಂದ ಪ್ರವಾಸಿ ಆಸ್ಟ್ರೇಲಿಯಾ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 123 ರನ್ ಅಂತರದ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ‌ ಪಾಕಿಸ್ತಾನವನ್ನು ಹಿಂದಿಕ್ಕಿ ಮರಳಿ ಅಗ್ರಸ್ಥಾನಕ್ಕೇರಿದೆ. ಆದರೆ ಪಾಕಿಸ್ತಾನ ತಂಡ ಭಾರತ ವಿರುದ್ಧದ ಪಂದ್ಯವನ್ನು ಗೆದ್ದರೆ ಮರಳಿ ಅಗ್ರಸ್ಥಾನಕ್ಕೇರಲಿದೆ.


ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸೀಸ್, ವಾರ್ನರ್-ಲಬುಶೇನ್ ಜತೆಯಾಟದ ನೆರವಿನಿಂದ 8 ವಿಕೆಟ್‌ಗೆ 392 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಉತ್ತಮ ಆರಂಭದ ಬಳಿಕ ಆಡಂ ಜಂಪಾ (48ಕ್ಕೆ 4) ದಾಳಿಗೆ ತತ್ತರಿಸಿ 41.5 ಓವರ್‌ಗಳಲ್ಲಿ 269 ರನ್‌ಗಳಿಗೆ ಕುಸಿಯಿತು. ಇದರೊಂದಿಗೆ ಟೆಂಬಾ ಬವುಮಾ ಬಳಗ ಐದು ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆ ಅನುಭವಿಸಿದೆ.


ಆಸ್ಟ್ರೇಲಿಯಾ: 8 ವಿಕೆಟ್‌ಗೆ 392 (ವಾರ್ನರ್ 106, ಟ್ರಾವಿಸ್ ಹೆಡ್ 64, ಮಾರ್ಷ್ 0, ಲಬುಶೇನ್ 124, ಇಂಗ್ಲೀಸ್ 50, ಶಮ್ಸಿ 61ಕ್ಕೆ4, ರಬಾಡ 79ಕ್ಕೆ2). ದಕ್ಷಿಣ ಆಫ್ರಿಕಾ: 41.5 ಓವರ್‌ಗಳಲ್ಲಿ 269 (ಡಿ ಕಾಕ್ 45, ಬವುಮಾ 46, ಕ್ಲಾಸೆನ್ 49, ಮಿಲ್ಲರ್ 49, ಜಾನ್ಸೆನ್ 23, ಜಂಪಾ 48ಕ್ಕೆ 4, ಎಲ್ಲಿಸ್ 32ಕ್ಕೆ 2).

46: ಡೇವಿಡ್ ವಾರ್ನರ್ (46) ಆರಂಭಿಕನಾಗಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಸಚಿನ್ ತೆಂಡುಲ್ಕರ್ (45) ದಾಖಲೆಯನ್ನು ಮುರಿದರು.

ಅಗ್ರಸ್ಥಾನಕ್ಕೆ ಆಸೀಸ್-ಪಾಕ್ ಫೈಟ್
ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ತಂಡ 121 ರೇಟಿಂಗ್ ಪಾಯಿಂಟ್ ಸಂಪಾದಿಸಿ ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ಪಾಕಿಸ್ತಾನವನ್ನು (120) ಎರಡನೇ ಸ್ಥಾನಕ್ಕೆ ತಳ್ಳುವ ಮೂಲಕ ಮರಳಿ ಅಗ್ರಸ್ಥಾನಕ್ಕೇರಿದೆ. ದ.ಆಫ್ರಿಕಾ ವಿರುದ್ಧ ಸರಣಿ ಜಯಿಸಿದರೆ ಆಸೀಸ್ ರ‌್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ ಉಳಿಯಲಿದೆ. ಅಥವಾ ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಒಂದೂ ಪಂದ್ಯವನ್ನಾದರೂ ಸೋಲಲಿ ಎಂದು ಪ್ರಾರ್ಥಿಸಬೇಕಿದೆ. ಭಾರತವನ್ನು ಪಾಕಿಸ್ತಾನ ಮಣಿಸಿದರೆ ಮರಳಿ ಅಗ್ರಸ್ಥಾನಕ್ಕೇರಲಿದೆ, ಆದರೆ ಆ ಸ್ಥಾನ ಕಾಯ್ದುಕೊಳ್ಳಲು ಪಾಕ್ ಏಷ್ಯಾ ಕಪ್ ಜಯಿಸಬೇಕಿದೆ. ಭಾರತ 114 ಪಾಯಿಂಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.