ಕ್ರೀಡೆ

ಮಾ.15ರಿಂದ ವಿಟಿಯು ಅಥ್ಲೆಟಿಕ್ಸ್ ಕ್ರೀಡಾಕೂಟ

ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಮಾ.15ರಿಂದ 18ರವರೆಗೆ ಕಾಲೇಜಿನ ಆವರಣದಲ್ಲಿ 26ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟ-ಸದೃಢ-2.0 ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.

15ರಂದು ಬೆಳಗ್ಗೆ 9ಕ್ಕೆ ವಿಟಿಯು ಕುಲಪತಿ ಡಾ. ವಿದ್ಯಾಶಂಕರ್ ಕ್ರೀಡಾಕೂಟ ಉದ್ಘಾಟಿಸುವರು. ಅರ್ಜುನ ಪ್ರಶಸ್ತಿ ಪುರಸ್ಕೃತ ಎನ್.ಡಿ.ಈಶನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಟಿಯು ಕುಲಸಚಿವ ಡಾ. ಬಿ.ಇ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಡಾ. ಟಿ.ಎನ್.ಶ್ರೀನಿವಾಸ, ಹಣಕಾಸು ಅಧಿಕಾರಿ ಡಾ.ಪ್ರಶಾಂತ್ ನಾಯಕ್, ಎನ್‌ಇಎಸ್ ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ, ಖಜಾಂಚಿ ಡಿ.ಜಿ.ರಮೇಶ್, ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪಿ.ವಿ.ಕಡಗದಕೈ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎ.ವಿ.ಚೇತನ್ ಉಪಸ್ಥಿತರಿರುವರು ಎಂದರು.

ಸದೃಢ-2.0 ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. 18ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭದಲ್ಲಿ ವಿಟಿಯು ಮೌಲ್ಯಮಾಪನ ಕುಲಸಚಿವ ಡಾ. ಟಿ.ಎನ್.ಶ್ರೀನಿವಾಸ ಭಾಗವಹಿಸಿ, ವಿಜೇತ ತಂಡಗಳಿಗೆ ಬಹುಮಾನ ವಿತರಿಸುವರು ಎಂದು ಹೇಳಿದರು.

ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಮಾತನಾಡಿ, ರಾಜ್ಯದ ವಿವಿಧ 150 ಇಂಜಿನಿಯರಿಂಗ್ ಕಾಲೇಜುಗಳ 2 ಸಾವಿರ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುವರು. ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ 44 ಅಥ್ಲೆಟಿಕ್ಸ್ ಕ್ರೀಡೆಗಳು ನಡೆಯಲಿವೆ. ಇಡಿಎಂ ಸಾಫ್ಟವೇರ್ ಮೂಲಕ ಆಧುನಿಕ ತಂತ್ರಜ್ಞಾನ ಬಳಸಿ ತೀರ್ಪು ನೀಡುವ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಪಟುಗಳಿಗೆ ಕಾಲೇಜಿನಲ್ಲೇ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕ್ರೀಡಾಕೂಟ ಆಯೋಜನೆಗೆ ವಿಟಿಯು 43 ಲಕ್ಷ ರೂ. ನೀಡಲಿದೆ ಎಂದರು. ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್, ದೈಹಿಕ ಶಿಕ್ಷಣ ನಿರ್ದೇಶಕ ಎ.ವಿ.ಚೇತನ್ ಸುದ್ದಿಗೋಷ್ಠಿಯಲ್ಲಿದ್ದರು.