ಹೊಸ ದಾಖಲೆಯೊಂದಿಗೆ ಮತ್ತೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ ವಿಶ್ವನಾಥ ಭಾಸ್ಕರ ಗಾಣಿಗ! Viswanatha Bhaskara Ganiga
- ರಾಷ್ಟ್ರೀಯ ಪವರ್ಲಿಫ್ಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ ವಿಶ್ವನಾಥ ಭಾಸ್ಕರ ಗಾಣಿಗ
- ಉತ್ತರಪ್ರದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಅದ್ಭುತ ಸಾಧನೆ
- ಡೆಡ್ಲಿಫ್ಟ್ನಲ್ಲಿ 337.5 ಕೆ.ಜಿ ಭಾರ ಎತ್ತಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಾಣ
- ವಿಶ್ವನಾಥ ಗಾಣಿಗ ಒಟ್ಟು 885 ಕೆ.ಜಿ ಭಾರ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಪವರ್ಲಿಫ್ಟರ್ ವಿಶ್ವನಾಥ ಭಾಸ್ಕರ ಗಾಣಿಗ ( Viswanatha Bhaskara Ganiga ) ಅವರು ಹೊಸ ದಾಖಲೆಯೊಂದಿಗೆ ಮತ್ತೆ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಉತ್ತರಪ್ರದೇಶದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಇಕ್ವಿಪ್ಡ್ ಸೀನಿಯರ್ ಪವರ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ.
ವಿಶ್ವನಾಥ ಭಾಸ್ಕರ ಗಾಣಿಗ ಅವರು 105 ಕೆ.ಜಿ. ವಿಭಾಗದಲ್ಲಿ ಬೆಂಚ್ಪ್ರೆಸ್ನಲ್ಲಿ 222.5 ಕೆ.ಜಿ. ಭಾರ ಎತ್ತಿ ಕಂಚಿನ ಪದಕ, ಡೆಡ್ಲಿಫ್ಟ್ನಲ್ಲಿ 337.5 ಕೆ.ಜಿ. ಭಾರ ಎತ್ತಿ ನೂತನ ರಾಷ್ಟ್ರೀಯ ದಾಖಲೆ ಮಾಡುವುದರ ಜೊತೆಗೆ, ಚಿನ್ನದ ಪದಕ ಪಡೆದು 105 ಕೆ.ಜಿ. ವಿಭಾಗದಲ್ಲಿ ಒಟ್ಟು 885 ಕೆ.ಜಿ. ಭಾರ ಎತ್ತಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಉತ್ತರಪ್ರದೇಶದ ಗಾಜಿಪುರ್ನಲ್ಲಿ ಆಗಸ್ಟ್ 29ರಿಂದ ಸೆಪ್ಟೆಂಬರ್ 3ರ ವರೆಗೆ ಈ ಚಾಂಪಿಯನ್ಷಿಪ್ ನಡೆದಿದೆ.
ಇದರೊಂದಿಗೆ ವಿಶ್ವನಾಥ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 26 ಸೇರಿದಂತೆ ಒಟ್ಟು 32 ಚಿನ್ನದ ಪದಕಗಳನ್ನು ಗಳಿಸಿದಂತಾಗಿದೆ. ಇದರೊಂದಿಗೆ ಅವರು ಎರಡು ರಾಷ್ಟ್ರೀಯ ಮಟ್ಟದ ದಾಖಲೆ ಮಾಡಿದಂತೆಯೂ ಆಗಿದೆ. ಈ ಹಿಂದೆ 105 ಕೆ.ಜಿ. ವಿಭಾಗದಲ್ಲಿ 327.5 ಕೆ.ಜಿ. ಕ್ಲಾಸಿಕ್ ಡೆಡ್ಲಿಫ್ಟ್ ಮಾಡಿ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ.
ಮೂಲತಃ ಉಡುಪಿ ಜಿಲ್ಲೆ ಕುಂದಾಪುರದ ಬಾಳಿಕೆರೆ ನಿವಾಸಿ ಆಗಿರುವ ವಿಶ್ವನಾಥ, ಬೆಂಗಳೂರಿನ ಜೆ.ಪಿ.ನಗರದ ಬಾಲಾರ್ಕ ಫಿಟ್ನೆಸ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.