ಕ್ರೀಡೆ

ಮಾಜಿ ಕ್ರಿಕೆಟಿಗ ಸೆಹ್ವಾಗ್-ಆರತಿ ವಿಚ್ಚೇದನ? 20 ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು! Virender Sehwag

Virender Sehwag : ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಅವರ ಪತ್ನಿ ಆರತಿ ಆಹ್ಲಾವತ್ ವಿಚ್ಛೇದನ ಪಡೆಯಲಿದ್ದು, ಇವರಿಬ್ಬರ 20 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ.

ಸೆಹ್ವಾಗ್ ಮತ್ತು ಆರತಿ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರರನ್ನು ಅನ್‌ಫಾಲೋ ಮಾಡಿರುವುದು ವಿಚ್ಛೇದನ ವರದಿಗೆ ಹೆಚ್ಚಿನ ಬಲ ತುಂಬಿದೆ. ಜತೆಗೆ ಇವರಿಬ್ಬರು ಹಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ 46 ವರ್ಷದ ಸೆಹ್ವಾಗ್ ಅವರು ಹಂಚಿಕೊಳ್ಳುತ್ತಿರುವ ಪೋಸ್ಟ್​ಗಳಲ್ಲಿ ಪತ್ನಿ ಆರತಿ ಎಲ್ಲಿಯೂ ಕಂಡುಬಂದಿಲ್ಲ. ಜತೆಗೆ ಕಳೆದ ವರ್ಷ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಸೆಹ್ವಾಗ್, ಇಬ್ಬರು ಪುತ್ರರು ಮತ್ತು ತಾಯಿಯೊಂದಿಗಿನ ಫೋಟೋಗಳನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವಿಚ್ಛೇದನ ವರದಿಗೆ ಪುಷ್ಟಿ ನೀಡಿತ್ತು.

ಸ್ಫೋಟಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದ ಸೆಹ್ವಾಗ್ ಮತ್ತು ಆರತಿ ಪರಸ್ಪರ ಪ್ರೀತಿಸಿ 2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಆರ್ಯವೀರ್, ವೇದಾಂತ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. (ಏಜೆನ್ಸೀಸ್​)