ನವದೆಹಲಿ: ದೆಹಲಿ ಸಹಿತ ಕೆಲವು ರಾಜ್ಯಗಳಲ್ಲಿ ಪಟಾಕಿಗೆ ನಿಷೇಧ ಹೇರಿರುವುದಕ್ಕೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ತಮ್ಮ ಎಂದಿನ ತಮಾಷೆ ಮಿಶ್ರಿತ ಶೈಲಿಯಲ್ಲಿ ಪಟಾಕಿ ನಿಷೇಧದ ವಿರುದ್ಧ ಚಾಟಿ ಬೀಸಿದ್ದಾರೆ.
ಕರ್ನಾಟಕ, ರಾಜಸ್ಥಾನ, ಒಡಿಶಾ, ಸಿಕ್ಕಿಂ, ಪಶ್ಚಿಮ ಬಂಗಾಳ ಸರ್ಕಾರಗಳು ಪಟಾಕಿಗೆ ನಿಷೇಧ ಹೇರಿರುವ ನಡುವೆ ದೆಹಲಿ ಸರ್ಕಾರ ಕೂಡ ನವೆಂಬರ್ 7ರಿಂದ 30ರವರೆಗೆ ದೆಹಲಿಯಲ್ಲಿ ಪಟಾಕಿ ಸಿಡಿಸದಂತೆ ನಿಷೇಧ ಹೇರಿದೆ. ಈ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟಲು ಮತ್ತು ಆ ಮೂಲಕ ಕರೊನಾ ಸೋಂಕಿತರಿಗೆ ತೊಂದರೆಯಾಗದಂತೆ ತಡೆಯಲು ಕ್ರಮ ಕೈಗೊಂಡಿದೆ. ಆದರೆ ಇದರಿಂದ ದೀಪಾವಳಿ ಹಬ್ಬ ಕಳೆಗುಂದುತ್ತದೆ ಎಂದು ಈಗಾಗಲೆ ಟೀಕೆಗಳು ವ್ಯಕ್ತವಾಗಿವೆ.
‘ನಾವು ಈ ಬಾರಿ ದೀಪಾವಳಿಗೆ ದೀಪ ಹಚ್ಚಬಹುದೇ ಎಂದು ಕೇಳಲು ಬಯಸಿದ್ದೇವೆ. ಅದರಿಂದ ಜಾಗತಿಕ ತಾಪಮಾನಕ್ಕೆ ಯಾವುದೇ ತೊಂದರೆ ಇಲ್ಲ ತಾನೇ’ ಎಂಬ ಬರಹದೊಂದಿಗೆ ಜನರು ಬೇಡುತ್ತ ನಿಂತಿರುವ ಚಿತ್ರವನ್ನು ಸೆಹ್ವಾಗ್ ಟ್ವೀಟಿಸಿದ್ದಾರೆ. ಜತೆಗೆ, ‘ಹಿಮಾಲಯದಲ್ಲಿ ಹಿಮಗಳು ಕರಗದಿರಲಿ’ ಎಂದೂ ಬರೆದುಕೊಂಡಿದ್ದಾರೆ. ಈ ಮೂಲಕ ಪಟಾಕಿ ನಿಷೇಧಕ್ಕೆ ಸೆಹ್ವಾಗ್ ಪರೋಕ್ಷವಾಗಿ ರಾಜ್ಯ ಸರ್ಕಾರಗಳನ್ನು ಟ್ರೋಲ್ ಮಾಡಿದ್ದಾರೆ.
ಸೆಹ್ವಾಗ್ ಈ ಹಿಂದೆ 2017ರಲ್ಲೂ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ ಸುಪ್ರೀಂ ಕೋರ್ಟ್‌ನಿಂದ ಆದೇಶ ಬಿದ್ದಾಗಲೂ ಈ ಬಗ್ಗೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.