ಕ್ರೀಡೆ

ಟೀಮ್ ಇಂಡಿಯಾದ ಈ ಇಬ್ಬರು ಸ್ಟಾರ್​ ಬ್ಯಾಟರ್​ಗಳಿಗೆ ಒಂದೊಳ್ಳೆ ಸಲಹೆ ಕೊಟ್ಟ 'ಬಜ್ಜಿ'

ಮೋಹನ್​ ಶೆಟ್ಟಿ

ನವದೆಹಲಿ: ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​, ಅತೀ ಹೆಚ್ಚಾಗಿ ವಿವಾದಗಳಲ್ಲಿಯೇ ಸಮಯ ವ್ಯರ್ಥ ಮಾಡುವುದು ಕ್ರಿಕೆಟ್ ಪ್ರಿಯರಿಗೆ ತಿಳಿದ ಸಂಗತಿಯೇ. ಇತ್ತೀಚೆಗಷ್ಟೇ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024ರ ಫೈನಲ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತದ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ನಾಯಕತ್ವದಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿತು. ಪಂದ್ಯ ಗೆಲ್ಲುತ್ತಿದ್ದಂತೆ ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಹರ್ಭಜನ್ ಸಿಂಗ್ ವಿಚಿತ್ರ ಹಾಗೂ ವ್ಯಂಗ್ಯವಾಗಿ ಕುಣಿದು ಕುಪ್ಪಳಿಸಿದ್ದರು. ಈ ವಿಷಯಕ್ಕೆ ಜಾಲತಾಣಗಳಲ್ಲಿ ಭಾರೀ ಟೀಕೆ ಎದುರಿಸಿದ ತಕ್ಷಣವೇ ಬಜ್ಜಿ ಬಹಿರಂಗವಾಗಿ ಜನರ ಬಳಿ ಕ್ಷಮೆಯಾಚಿಸಿದರು. ಸದ್ಯದ ಮಟ್ಟಿಗೆ ವಿವಾದಗಳಿಂದ ದೂರ ಉಳಿದಿರುವ ಸಿಂಗ್, ಇದೀಗ ತಮ್ಮ ಗೆಳೆಯರ ಕ್ರಿಕೆಟ್ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ, ಮುಂದಿನ ದಿನಗಳಲ್ಲಿ ಐಪಿಎಲ್​ ಆವೃತ್ತಿಯಲ್ಲಿ ಕಾಣಿಸಿಕೊಳ್ಳಬಹುದೇ ವಿನಃ ಇನ್ಯಾವ ಸರಣಿಗಳಲ್ಲಿ ಆಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಆದ್ರೆ, ಕ್ರಿಕೆಟ್ ದಿಗ್ಗಜರು ಮತ್ತು ಮಾಜಿ ಸ್ಟಾರ್ ಆಟಗಾರರು ಮಾತ್ರ ಕೊಹ್ಲಿ ಮತ್ತು ಶರ್ಮ ಇನ್ನೂ ಕೆಲವು ಫಾರ್ಮೆಟ್​ಗಳಲ್ಲಿ ಹೆಚ್ಚಿನ ಸಮಯ ಕ್ರೀಸ್​ನಲ್ಲಿ ಆಡಬಹುದು, ತಮ್ಮ ತಂಡಕ್ಕೆ ಅದ್ಭುತ ಕೊಡುಗೆ ಕೊಡಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಇದೀಗ ಹರ್ಭಜನ್​ ತಮ್ಮ ಸ್ನೇಹಿತರ ಕ್ರಿಕೆಟ್ ಭವಿಷ್ಯ ಉಜ್ವಲವಾಗಿದೆ ಎಂದು ಹೇಳಿದ್ದಾರೆ.

"ವಿರಾಟ್ ಕೊಹ್ಲಿ ಮುಂದಿನ ಐದು ವರ್ಷಗಳ ಕಾಲ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬಹುದು ಮತ್ತು ರೋಹಿತ್ ಶರ್ಮ ಇನ್ನೆರೆಡು ವರ್ಷಗಳ ಕಾಲ ಕ್ರೀಸ್​ನಲ್ಲಿ ಅಬ್ಬರಿಸಬಹುದು. ಪ್ರಸ್ತುತ 35ನೇ ವಯಸ್ಸಿನಲ್ಲಿರುವ ವಿರಾಟ್ ದಿನದಿಂದ ದಿನಕ್ಕೆ​ ಮತ್ತಷ್ಟು ಬಲಿಷ್ಠವಾಗುತ್ತಿದ್ದಾರೆ. ಕಳೆದ ಐಪಿಎಲ್​ನಲ್ಲಿ ನಾವೆಲ್ಲಾ ಅವರ ಬ್ಯಾಟಿಂಗ್​ ಸಾಮರ್ಥ್ಯ ನೋಡಿದ್ದೇವೆ. ಸೀಸನ್​ ಅಂತ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್​ ಆಗಿ ಹೊರಹೊಮ್ಮಿದ್ದು, ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ. ಹೀಗಿರುವಾಗ ತಮ್ಮ ಆಟವನ್ನು ಕೊಹ್ಲಿ ಮುಂದುವರಿಸಬೇಕು" ಎಂದಿದ್ದಾರೆ.