ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಎಡಗೈ ಆರಂಭಿಕರಲ್ಲಿ ಒಬ್ಬರಾದ ಶಿಖರ್ ಧವನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ಗೆ ಶನಿವಾರ ವಿದಾಯ ಘೋಷಿಸಿದ್ದಾರೆ. 38 ವರ್ಷದ ಶಿಖರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ವಿದಾಯ ಘೋಷಿಸಿದ್ದರು. ಧವನ್ ದ್ವಿಪಕ್ಷೀಯ ಸರಣಿಗಳಲ್ಲಿ ಗಳಿಸುತ್ತಿದ್ದ ರನ್ಗಳದ್ದು ಒಂದು ತೂಕವಾದರೆ, ಐಸಿಸಿ ಟೂರ್ನಿಗಳಲ್ಲಿ ಅವರು ಗಳಿಸುತ್ತಿದ್ದ ರನ್ಗಳದ್ದು ಬೇರೆಯದ್ದೇ ತೂಕವಾಗಿರುತ್ತಿತ್ತು. ಇದಕ್ಕಾಗಿಯೇ ಅವರನ್ನು “ಮಿಸ್ಟರ್ ಐಸಿಸಿ’' ಎಂದೇ ಖ್ಯಾತಿ ಪಡೆದಿದ್ದರು.
ಶಿಖರ್ ಧವನ್ ನಿವೃತ್ತಿ ವಿಚಾರ ಪ್ರಕಟಿಸುತ್ತಿದ್ದಂತೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಅವರನ್ನು ಅಭಿನಂದಿಸುತ್ತಿದ್ದು, ವಿರಾಟ್ ಕೊಹ್ಲಿ ಕೂಡ ಗಬ್ಬರ್ಗೆ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದು, ಶಿಖರ್ಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಐಪಿಎಲ್ಗೆ ಮರಳಲು ಸಜ್ಜಾದ ಸಿಕ್ಸರ್ ಕಿಂಗ್; ಸುದೀರ್ಘ ಕಪ್ ಬರವನ್ನು ನೀಗಿಸಲಿದ್ದಾರಾ ಆರ್ಸಿಬಿಯ ಮಾಜಿ ಪ್ಲೇಯರ್
ಶಿಖರ್ ನಿಮ್ಮ ಪದಾರ್ಪಣೆ ಪಂದ್ಯದ ನಿರ್ಭೀತ ಬ್ಯಾಟಿಂಗ್ನಿಂದ ಹಿಡಿದು ಅತ್ಯಂತ ವಿಶ್ವಾಸಾರ್ಹ ಓಪನರ್ಗಳಲ್ಲಿ ಒಬ್ಬರಾದ ನೀವು ನಮಗೆ ಸಾಕಷ್ಟು ನೆನಪುಗಳನ್ನು ಕೊಟ್ಟಿದ್ದೀರಿ. ಆಟದ ಮೇಲಿನ ನಿಮ್ಮ ಉತ್ಸಾಹ, ನಿಮ್ಮ ಕ್ರೀಡಾ ಮನೋಭಾವ ಮತ್ತು ಸ್ಟೈಲ್ಅನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ನಿಮ್ಮ ಪರಂಪರೆಯು ಜೀವಿಸುತ್ತದೆ. ನೆನಪುಗಳು, ಮರೆಯಲಾಗದ ಪ್ರದರ್ಶನಗಳು ಮತ್ತು ಯಾವಾಗಲೂ ನಿಮ್ಮ ಹೃದಯದಿಂದ ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು. ಗಬ್ಬರ್ ಮೈದಾನದ ಹೊರಗೆ ನಿಮ್ಮ ಮುಂದಿನ ಇನ್ನಿಂಗ್ಸ್‌ಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಿಖರ್ ಧವನ್ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಶಿಖರ್ 114(94), 102*(107), 48(41), 68(92), 31(24), 68(65), 125(128), 78(83), 46( 34), 21(22) ರನ್ ಕಲೆಹಾಕಿದ್ದರು.