ಕ್ರೀಡೆ

ಡೈಪರ್​ ಬದಲಿಸಲು ರೆಡಿಯಾಗಿ: IPL ಟ್ರೋಫಿ ಗೆಲುವಿನ ಬೆನ್ನಲ್ಲೇ ಫಿಲ್​ ಸಾಲ್ಟ್​ಗೆ ಕೊಹ್ಲಿ ಮೆಸೇಜ್​! Phil Salt

Phil Salt : ಮಂಗಳವಾರ (ಜೂನ್​ 03) ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್​) ಟ್ರೋಫಿಯನ್ನು ಎತ್ತಿ ಹಿಡಿದಿದೆ. ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ಕ್ರೈಮ್ ಪಾರ್ಟ್ನರ್​ ಫಿಲ್ ಸಾಲ್ಟ್‌ಗೆ ಒಂದು ಪ್ರಮುಖ ಸಂದೇಶವನ್ನು ಕಳುಹಿಸಿದ್ದಾರೆ.

ಗೆಲುವಿನ ಬೆನ್ನಲ್ಲೇ, ಕೊಹ್ಲಿ ತಮ್ಮ ಆರಂಭಿಕ ಸಹ ಆಟಗಾರ ಫಿಲ್​ ಸಾಲ್ಟ್​ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಇಬ್ಬರು ಟ್ರೋಫಿ ಹಿಡಿದಿರುವ ಫೋಟೋವನ್ನು ಇನ್​ಸ್ಟಾ ಸ್ಟೋರಿಯಲ್ಲಿ ಪೋಸ್ಟ್​ ಮಾಡಿರುವ ಕೊಹ್ಲಿ, ವೆಲ್​ ಡನ್​ ಪಾರ್ಟ್ನರ್​, ಈಗ ನಿಜವಾದ ಕೆಲಸಕ್ಕೆ ಹಿಂತಿರುಗಿ ಮತ್ತು ಡೈಪರ್ ಬದಲಾಯಿಸಲು ಸಿದ್ಧರಾಗಿ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್​ ತಂಡದ ಆಟಗಾರ ಫಿಲ್​ ಸಾಲ್ಟ್ ಇತ್ತೀಚೆಗೆ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಈ ಹೇಳಿಕೆ ನೀಡಿದ್ದಾರೆ. ಮೇ 29ರಂದು ಆರ್‌ಸಿಬಿ ಕ್ವಾಲಿಫೈಯರ್ 1 ಗೆಲುವಿನ ನಂತರ ಫಿಲ್​ ಸಾಲ್ಟ್​ ತನ್ನ ಪತ್ನಿಯನ್ನು ನೋಡಲು ಮನೆಗೆ ತೆರಳಿದರು. ಫೈನಲ್​ ಪಂದ್ಯ ಇದ್ದಿದ್ದರಿಂದ ಆ ದಿನ ಬೆಳಗ್ಗೆ ಮತ್ತೆ ಹಿಂತಿರುಗಿದರು. ಮಗು ಆಗಿರುವ ಹಿನ್ನೆಲೆಯಲ್ಲಿ ಡೈಪರ್​ ಬದಲಾಯಿಸಲು ರೆಡಿಯಾಗಿ ಎಂದು ಕೊಹ್ಲಿ ತಮಾಷೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ-ಫಿಲ್ ಸಾಲ್ಟ್ ಜೊತೆಯಾಟ

2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೊಹ್ಲಿ ಹಾಗೂ ಸಾಲ್ಟ್ ಉತ್ತಮ ಆರಂಭಿಕ ಜೊತೆಯಾಟವನ್ನು ನೀಡಿದ್ದಾರೆ. ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ಇಂಡೋ-ಇಂಗ್ಲಿಷ್ ಜೋಡಿ 47.42 ರ ಸರಾಸರಿಯಲ್ಲಿ 664 ರನ್‌ಗಳ ಕೊಡುಗೆ ನೀಡಿತು. ಈ ಋತುವಿನಲ್ಲಿ ಸಾಲ್ಟ್ 387 ರನ್‌ಗಳಿಸಿದರೆ, ಕೊಹ್ಲಿ 657 ರನ್‌ಗಳ ಕೊಡುಗೆ ನೀಡಿದ್ದಾರೆ. ಇಂಗ್ಲೆಂಡ್ ಪ್ರಸ್ತುತ ವೆಸ್ಟ್ ಇಂಡೀಸ್ ತಂಡವನ್ನು ಆತಿಥ್ಯ ವಹಿಸುತ್ತಿರುವುದರಿಂದ, ಬುಧವಾರ (ಜೂನ್ 4) ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಸಾಲ್ಟ್ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಆರ್‌ಸಿಬಿಯ ವಿಜಯೋತ್ಸವ ಮೆರವಣಿಗೆ

ಬುಧವಾರ (ಜೂನ್​ 04) 1.30ಕ್ಕೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಆರ್‌ಸಿಬಿ ತಂಡ ಇಳಿಯಲಿದ್ದು, ನಂತರ ಸಂಜೆ 4 ರಿಂದ 5 ಗಂಟೆಯ ನಡುವೆ ವಿಧಾನಸೌಧದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ. ನಂತರ, ಇಡೀ ಆರ್‌ಸಿಬಿ ತಂಡ ಸಂಜೆ 5 ಗಂಟೆಯ ನಂತರ ಸಾರ್ವಜನಿಕ ಮೆರವಣಿಗೆಯಲ್ಲಿ ವಿಧಾನಸೌಧದಿಂದ ಓಪನ್-ಟಾಪ್ ಬಸ್ ಮೂಲಕ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗುತ್ತದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮವು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ (43 ರನ್​, 35 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಯಾಂಕ್ ಅಗರ್ವಾಲ್ (24), ರಜತ್ ಪಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಮತ್ತು ಜಿತೇಶ್ ಶರ್ಮಾ (24) ಉಪಯುಕ್ತ ರನ್​ಗಳ ಕಾಣಿಕೆ ನೀಡಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಪಂಜಾಬ್​ ಪರ ಶಶಾಂಕ್ ಸಿಂಗ್ (ಅಜೇಯ 61 ರನ್​, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಜೋಶ್ ಇಂಗ್ಲಿಷ್ (39 ರನ್​, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು, ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)