ಕ್ರೀಡೆ

ಆರ್‌ಸಿಬಿ ಸೋಲಿನ ನಡುವೆಯೂ ಹಲವು ದಾಖಲೆ ಬರೆದ ವಿರಾಟ ಕೊಹ್ಲಿ: ಐಪಿಎಲ್‌ನಲ್ಲಿ ಅನಪೇಕ್ಷಿತ ದಾಖಲೆ

ಜೈಪುರ: ಆರಂಭಿಕ ಜೋಸ್ ಬಟ್ಲರ್ (100* ರನ್,58 ಎಸೆತ, 9 ಬೌಂಡರಿ, 4 ಸಿಕ್ಸರ್) ಸಿಡಿಸಿದ ಟೂರ್ನಿ ಇತಿಹಾಸದ 6ನೇ ಶತಕದ ನೆರವಿನಿಂದ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-17ರಲ್ಲಿ ಪ್ರವಾಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಟೂರ್ನಿಯಲ್ಲಿ ಸತತ 4ನೇ ಗೆಲುವಿನೊಂದಿಗೆ ಅಜೇಯ ಓಟ ಮುಂದುವರಿಸಿರುವ ಸಂಜು ಸ್ಯಾಮ್ಸನ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (113* ರನ್, 72 ಎಸೆತ, 12 ಬೌಂಡರಿ, 4 ಸಿಕ್ಸರ್) ರನ್‌ಪ್ರವಾಹವನ್ನು ಜೈಪುರದಲ್ಲೂ ಮುಂದುವರಿಸಿದ ನಡುವೆಯೂ ಆರ್‌ಸಿಬಿ ತನ್ನ 5ನೇ ಲೀಗ್ ಪಂದ್ಯದಲ್ಲಿ ಸತತ ಮೂರನೇ ಸೋಲುಂಡು 8ನೇ ಸ್ಥಾನದಲ್ಲಿ ಉಳಿದಿದೆ.

8: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ದಾಖಲೆಯ 8ನೇ ಹಾಗೂ ಹಾಲಿ ಆವೃತ್ತಿಯ ಮೊದಲ ಶತಕ ಸಿಡಿಸಿದರು. ಕ್ರಿಸ್ ಗೇಲ್ (6), ಜೋಸ್ ಬಟ್ಲರ್ (6) ನಂತರದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಜಂಟಿ ನಿಧಾನಗತಿ ಶತಕ: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಸಿಡಿಸಿದ 8 ಶತಕಗಳ ಪೈಕಿ ಮಾತ್ರವಲ್ಲ ಐಪಿಎಲ್ ಇತಿಹಾಸದಲ್ಲೇ ಇದು ಜಂಟಿ ನಿಧಾನಗತಿಯ ಶತಕವೆನಿಸಿದೆ. 2009ರಲ್ಲಿ ಆರ್‌ಸಿಬಿ ಪರವಾಗಿಯೇ ಮನೀಷ್ ಪಾಂಡೆ ಕೂಡ 67 ಎಸೆತಗಳಲ್ಲೇ ಡೆಕ್ಕನ್ ಚಾರ್ಜರ್ಸ್‌ ವಿರುದ್ಧ ಶತಕ ಸಿಡಿಸಿದ್ದು ಹಿಂದಿನ ಅತಿ ನಿಧಾನಗತಿ ಶತಕವಾಗಿದೆ. ಇನ್ನು ಕೊಹ್ಲಿ ಐಪಿಎಲ್ ಇನಿಂಗ್ಸ್‌ವೊಂದರಲ್ಲಿ 2ನೇ ಅತ್ಯಧಿಕ ಎಸೆತ (72) ಎದುರಿಸಿದರು. ಬ್ರೆಂಡನ್ ಮೆಕ್ಕಲಂ (73), ಮನೀಷ್ ಪಾಂಡೆ (73) ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

3: ವಿರಾಟ್ ಕೊಹ್ಲಿ (9) ಟಿ20 ಕ್ರಿಕೆಟ್‌ನಲ್ಲಿ 3ನೇ ಗರಿಷ್ಠ ಶತಕವೀರ ಎನಿಸಿದರು. ಕ್ರಿಸ್ ಗೇಲ್ (22), ಬಾಬರ್ ಅಜಮ್ (11) ಮೊದಲೆರಡು ಸ್ಥಾನದಲ್ಲಿದ್ದಾರೆ.

ಏಳೂವರೆ ಸಾವಿರ ರನ್‌ಗಳಿಸಿದ ಕೊಹ್ಲಿ: ಐಪಿಎಲ್‌ನಲ್ಲಿ ಗರಿಷ್ಠ ರನ್‌ಗಳಿಸಿರುವ ಬ್ಯಾಟರ್ ಆಗಿರುವ ವಿರಾಟ್ ಕೊಹ್ಲಿ 7,500 ರನ್‌ಗಳಿಸಿದ ಮೊದಲ ಆಟಗಾರ ಎನಿಸಿದರು. 242 ಪಂದ್ಯಗಳಲ್ಲಿ 52 ಅರ್ಧಶತಕ, 8 ಶತಕ ಸಿಡಿಸಿರುವ ಕೊಹ್ಲಿ ಇದುವರೆಗೆ ಒಟ್ಟು 7,597 ರನ್ ಕಲೆಹಾಕಿ ಅಗ್ರಸ್ಥಾನದಲ್ಲಿದ್ದಾರೆ. ಶಿಖರ್ ಧವನ್ (6,755), ಡೇವಿಡ್ ವಾರ್ನರ್ (6,545), ರೋಹಿತ್ ಶರ್ಮ (6,280) ನಂತರದ ಸ್ಥಾನದಲ್ಲಿದ್ದಾರೆ.

6: ವಿರಾಟ್ ಕೊಹ್ಲಿ-ಡು ಪ್ಲೆಸಿಸ್ ಜೋಡಿ ಐಪಿಎಲ್‌ನಲ್ಲಿ 6ನೇ ಬಾರಿ 100 ಪ್ಲಸ್ ರನ್ ಕಲೆಹಾಕುವ ಮೂಲಕ ವಾರ್ನರ್-ಧವನ್ ಸಾಧನೆಯನ್ನು ಸರಿಗಟ್ಟಿತು. ವಿರಾಟ್ ಕೊಹ್ಲಿ- ಡಿವಿಲಿಯರ್ಸ್‌ ಜೋಡಿ 10 ಬಾರಿ ಈ ಸಾಧನೆ ಮಾಡಿ ಅಗ್ರಸ್ಥಾನದಲ್ಲಿದೆ. ಕೊಹ್ಲಿ-ಗೇಲ್ 9 ಬಾರಿ ಗಳಿಸಿದ್ದಾರೆ.

1. ಹಾಲಿ ಐಪಿಎಲ್‌ನ ಪವರ್ ಪ್ಲೇನಲ್ಲಿ ಇದುವರೆಗೆ ವಿರಾಟ್ ಕೊಹ್ಲಿ (121) ಗರಿಷ್ಠ ರನ್‌ಗಳಿಸಿದ ಬ್ಯಾಟರ್ ಎನಿಸಿದ್ದಾರೆ. ಡೇವಿಡ್ ವಾರ್ನರ್ (105), ಟ್ರಾವಿಸ್ ಹೆಡ್ (101) ನಂತರದಲ್ಲಿದ್ದಾರೆ.

2. ಜೋಸ್ ಬಟ್ಲರ್ ಐಪಿಎಲ್‌ನ ವೈಯಕ್ತಿಕ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ 2ನೇ ಬ್ಯಾಟರ್. ಕೆಎಲ್ ರಾಹುಲ್ ಮೊದಲಿಗ.

5.ವಿರಾಟ್ ಕೊಹ್ಲಿ-ಡು ಪ್ಲೆಸಿಸ್ ಜೋಡಿ ಐಪಿಎಲ್‌ನಲ್ಲಿ 5ನೇ ಬಾರಿ ಮೊದಲ ವಿಕೆಟ್‌ಗೆ 100 ಪ್ಲಸ್ ರನ್ ಕಲೆಹಾಕಿತು. ವಾರ್ನರ್- ಧವನ್ (6) ಜೋಡಿ ಮೊದಲ ಸ್ಥಾನದಲ್ಲಿದೆ.

47: ಆರ್‌ಸಿಬಿ ಐಪಿಎಲ್‌ನಲ್ಲಿ 47ನೇ ಬಾರಿಗೆ 100 ಪ್ಲಸ್ ರನ್ ಜತೆಯಾಟ ನೀಡಿತು. ಸಿಎಸ್‌ಕೆ (38) ನಂತರದಲ್ಲಿದೆ.

3. ಆರ್‌ಸಿಬಿ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ದಾಖಲಾದ ಮೂರನೇ ಶತಕದ ಜತೆಯಾಟ ಇದಾಗಿದೆ. ಕೊಹ್ಲಿ-ಪಡಿಕ್ಕಲ್ (181*), ಗ್ರೇಮ್ ಸ್ಮಿತ್-ಸ್ವಪ್ನಿಲ್ (109) ಮೊದಲೆರಡು.