ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ನಡೆಯಲಿರುವ ಕೇಪ್‌ಟೌನ್‌ನಲ್ಲಿ 100ನೇ ಟೆಸ್ಟ್ ಆಡಬೇಕಾಗಿದ್ದ ವಿರಾಟ್ ಕೊಹ್ಲಿ, ಬೆನ್ನುನೋವಿನಿಂದ ಜೊಹಾನ್ಸ್‌ಬರ್ಗ್ ಟೆಸ್ಟ್ ತಪ್ಪಿಸಿಕೊಂಡಿರುವುದರಿಂದ ಆ ಅವಕಾಶದಿಂದ ವಂಚಿತರಾಗಿದ್ದಾರೆ. ಇದು ಕೊಹ್ಲಿಗೆ ವರದಾನವೂ ಆಗಿದ್ದು, ತವರಿನಲ್ಲೇ 100ನೇ ಟೆಸ್ಟ್ ಪಂದ್ಯವನ್ನು ಆಡುವ ಅದೃಷ್ಟ ಸಂಪಾದಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಭಾರತ ತಂಡ ತವರಿನಲ್ಲಿ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದುವೇ ಕೊಹ್ಲಿಗೆ 100ನೇ ಟೆಸ್ಟ್ ಆಗುವ ನಿರೀಕ್ಷೆ ಇದೆ. ಫೆಬ್ರವರಿ 25ರಿಂದ ಮಾರ್ಚ್ 1ರವರೆಗೆ ಈ ಪಂದ್ಯ ನಡೆಯಲಿದೆ. ಇದಕ್ಕೆ ಮುನ್ನ ಕೊಹ್ಲಿ ಕೇಪ್‌ಟೌನ್ ಟೆಸ್ಟ್‌ನಲ್ಲಿ ಆಡಲು ಫಿಟ್ ಆಗಬೇಕು ಮತ್ತು ಲಂಕಾ ವಿರುದ್ಧದ ತವರಿನ ಸರಣಿಯಿಂದ ವಿಶ್ರಾಂತಿಯನ್ನು ಬಯಸಬಾರದು.
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಮಾಜಿ ನಾಯಕರೂ ಆಗಿರುವ ಕೊಹ್ಲಿ, ಬೆಂಗಳೂರು ಈಗಾಗಲೆ 2ನೇ ತವರೂರು ಎನಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ 100ನೇ ಟೆಸ್ಟ್ ಆಡುವುದು ಕೊಹ್ಲಿ ಪಾಲಿಗೆ ಅತ್ಯಂತ ವಿಶೇಷ ಆಗಿರಲಿದೆ. ಕೊಹ್ಲಿ ಬೆಂಗಳೂರಿನಲ್ಲಿ 100ನೇ ಟೆಸ್ಟ್ ಆಡುವುದಾದರೆ ಪ್ರೇಕ್ಷಕರಿಗೆ ಪ್ರವೇಶ ಅವಕಾಶ ಕಲ್ಪಿಸಬೇಕೆಂದು ದಿಗ್ಗಜ ಸುನೀಲ್ ಗಾವಸ್ಕರ್ ಕೂಡ ಈಗಾಗಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಒಂದು ವೇಳೆ ಕೇಪ್‌ಟೌನ್ ಟೆಸ್ಟ್‌ಗೂ ಫಿಟ್ ಆಗದಿದ್ದರೆ, ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಮಾರ್ಚ್ 5ರಿಂದ ನಡೆಯಲಿರುವ 2ನೇ ಟೆಸ್ಟ್ ಅವರ ಪಾಲಿಗೆ 100ನೇ ಟೆಸ್ಟ್ ಆಗಲಿದೆ.