ಕ್ರೀಡೆ

ಅನ್‌ಫಾಲೋ ಮಾಡಿದ ಕೊಹ್ಲಿ! ಮುಂದುವರಿದ ಗಂಗೂಲಿ ಜತೆಗಿನ ಮುನಿಸು

ನವದೆಹಲಿ: ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ ಮತ್ತು ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಸಮಯದಲ್ಲಿ ಇಬ್ಬರ ನಡುವೆ ನಡೆದಿದ್ದ ಜಗಳದ ಬಿಸಿ ಇನ್ನೂ ತಿಳಿಯಾಗದಿರುವುದು ಕಳೆದ ಶನಿವಾರ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ-ಡೆಲ್ಲಿ ನಡುವಿನ ಪಂದ್ಯದ ವೇಳೆ ಎದ್ದು ಕಂಡಿತ್ತು. ಈ ಪಂದ್ಯದ ನಂತರವೂ ಇಬ್ಬರ ನಡುವಿನ ದ್ವೇಷ ಮುಂದುವರಿದಿದ್ದು, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಗಂಗೂಲಿ ಅವರನ್ನು ಕೊಹ್ಲಿ ಅನ್‌ಫಾಲೋ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಅನ್​ಫಾಲೋ ಮಾಡಿದ ಕೊಹ್ಲಿ!

ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ ಒಟ್ಟು 276 ಜನರನ್ನು ಫಾಲೋ ಮಾಡುತ್ತಿದ್ದರು. ಈ ಪೈಕಿ ಗಂಗೂಲಿಯನ್ನು ಡೆಲ್ಲಿ ವಿರುದ್ಧದ ಪಂದ್ಯದ ಬೆನ್ನಲ್ಲೇ ಕೊಹ್ಲಿ ಅನ್ ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಪಂದ್ಯದ ಬಳಿಕ ಉಭಯ ತಂಡಗಳ ಆಟಗಾರರು, ತರಬೇತಿ ಸಿಬ್ಬಂದಿ ಹಸ್ತಲಾಘವ ನೀಡುತ್ತಿದ್ದರೆ, ಕೊಹ್ಲಿ ಮತ್ತು ಡೆಲ್ಲಿ ತಂಡದ ನಿರ್ದೇಶಕರಾಗಿರುವ ಗಂಗೂಲಿ ಹಸ್ತಲಾಘವ ನೀಡಲು ನಿರಾಕರಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

2021ರಲ್ಲಿ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿದಾಗ ಇಬ್ಬರೂ ಮಾಧ್ಯಮ-ಸಾಮಾಜಿಕ ಜಾಲತಾಣಗಳ ಮೂಲಕ ವಾಕ್ಸಮರ ನಡೆಸಿದ್ದರು.