ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ಗೆ 3ನೇ ಕ್ರಮಾಂಕ ಬಿಟ್ಟುಕೊಟ್ಟು 4ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡೆಯನ್ನು ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಆಸ್ಟ್ರೇಲಿಯಾದಂಥ ಬಲಿಷ್ಠ ತಂಡದೆದುರು ಪ್ರಯೋಗಕ್ಕೆ ಮುಂದಾದ ಭಾರತ ತಂಡದ ಕ್ರಮಕ್ಕೆ ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್ ಮತ್ತು ಸಂಜಯ್ ಮಂಜ್ರೇಕರ್ ಮತ್ತಿರರು ಕಿಡಿಕಾರಿದ್ದಾರೆ.
‘ಕೊಹ್ಲಿ 4ನೇ ಕ್ರಮಾಂಕಕ್ಕೆ ಇಳಿದ ಕಾರ್ಯತಂತ್ರ ಸರಿಯಲ್ಲ. ಸಚಿನ್ ತೆಂಡುಲ್ಕರ್ ಅವರೂ 4ನೇ ಕ್ರಮಾಂಕದಲ್ಲಿ ಆಡಲು ಇಷ್ಟಪಡುತ್ತಿರಲಿಲ್ಲ. ಪ್ರಯೋಗಗಳನ್ನು ನಡೆಸಲು ಆಸ್ಟ್ರೇಲಿಯಾದಂಥ ಬಲಿಷ್ಠ ತಂಡ ಕೊನೆಯ ಆಯ್ಕೆಯಾಗಿರಬೇಕಾಗಿತ್ತು. ಕೊಹ್ಲಿ ಎಂದಿನಂತೆ 3ನೇ ಕ್ರಮಾಂಕದಲ್ಲಿ ಆಡಲಿ. ರಾಹುಲ್ರನ್ನು ಮತ್ತೆ 4ನೇ ಕ್ರಮಾಂಕಕ್ಕೆ ಇಳಿಸಬೇಕು’ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಕೊಹ್ಲಿ ಭಾರತ ತಂಡದ ಅತ್ಯುತ್ತಮ ಬ್ಯಾಟ್ಸ್ಮನ್. ಹೀಗಾಗಿ ಅವರು ಎಂದಿನ ಬ್ಯಾಟಿಂಗ್ ಕ್ರಮಾಂಕದಲ್ಲೇ ಮುಂದುವರಿಯಬೇಕು. ಅವರು ಅದೇ ಕ್ರಮಾಂಕದಲ್ಲಿ ಆಡಿ ಭಾರತಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಹೀಗಾಗಿ ಬದಲಾವಣೆ ಅಗತ್ಯವಿಲ್ಲ ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಇನಿಂಗ್ಸ್ನ 28ನೇ ಓವರ್ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು, 14 ಎಸೆತಗಳಲ್ಲಿ 16 ರನ್ ಗಳಿಸಿ ಔಟಾಗಿದ್ದರು. ಕೊಹ್ಲಿ ಹಿಂಬಡ್ತಿ ಆಸ್ಟ್ರೇಲಿಯಾದ ಪಾಲಿಗೆ ಲಾಭದಾಯಕ ನಡೆ ಎಂದು ಆಸೀಸ್ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್ ಅವರೂ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ನಿಂದಲೂ ಕಾಡುತ್ತಿದೆ: ಕಳೆದ ವರ್ಷ ಏಕದಿನ ವಿಶ್ವಕಪ್ಗೆ ಮುನ್ನವೂ ಭಾರತ ತಂಡದ 4ನೇ ಕ್ರಮಾಂಕದಲ್ಲಿ ಯಾರು ಆಡಬೇಕೆಂಬ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದವು. ವಿಶ್ವಕಪ್ಗೆ ಮುನ್ನ ಹಲವು ಸರಣಿಗಳಲ್ಲಿ ಅಂಬಟಿ ರಾಯುಡು 4ನೇ ಕ್ರಮಾಂಕದಲ್ಲಿ ಆಡಿ ಮಿಶ್ರಫಲ ಕಂಡಿದ್ದರು. ಆದರೆ ವಿಶ್ವಕಪ್ಗೆ ಅವರನ್ನು ಕೈಬಿಟ್ಟು, ವಿಜಯ್ ಶಂಕರ್ರನ್ನು ಆರಿಸಲಾಗಿತ್ತು. ಬಳಿಕ ವಿಶ್ವಕಪ್ನಲ್ಲಿ ರಾಹುಲ್ರನ್ನು 4ನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಧವನ್ ಗಾಯಗೊಂಡಾಗ ರಾಹುಲ್ ಮತ್ತೆ ಆರಂಭಿಕರಾದರೆ, ರಿಷಭ್ ಪಂತ್ 4ನೇ ಕ್ರಮಾಂಕದಲ್ಲಿ ಆಡಿದ್ದರು. ವಿಶ್ವಕಪ್ ಬಳಿಕ ಈ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಿ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದರು. ಆದರೆ ಆಸೀಸ್ ವಿರುದ್ಧ ಸರಣಿಯಲ್ಲಿ ಕೊಹ್ಲಿ 4ನೇ ಕ್ರಮಾಂಕ್ಕೆ ಇಳಿದು ಅಚ್ಚರಿ ಮೂಡಿಸಿದ್ದಾರೆ.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುವ ತಮ್ಮ ನಡೆಯಿಂದ ವೈಫಲ್ಯ ಕಂಡಿದ್ದರೂ, ಈ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ. ಆದರೆ ಈ ಕಾರ್ಯತಂತ್ರದ ಬಗ್ಗೆ ಮರುಪರಿಶೀಲನೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ‘ಭಾರತ ತಂಡದ 4ನೇ ಕ್ರಮಾಂಕದ ಬಗ್ಗೆ ಈ ಹಿಂದೆಯೂ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಎಲ್ ರಾಹುಲ್ಗೆ
ಬ್ಯಾಟಿಂಗ್ ವಿಭಾಗದಲ್ಲಿ ಸ್ಥಾನ ಕಲ್ಪಿಸುವ ಸಲುವಾಗಿ ಈ ಬದಲಾವಣೆ ಮಾಡಲಾಯಿತು. ಆದರೆ ಇದು ನಮ್ಮ ಪರವಾಗಿರಲಿಲ್ಲ. ಹೀಗಾಗಿ ಈ ಬಗ್ಗೆ ಮರುಪರಿಶೀಲನೆ ಮಾಡಬಹುದು’ ಎಂದು ಕೊಹ್ಲಿ 10 ವಿಕೆಟ್ ಸೋಲಿನ ಬಳಿಕ ನುಡಿದರು. ‘ಒಂದು ಪಂದ್ಯದ ಫಲಿತಾಂಶದಿಂದ ಜನರು ಗಾಬರಿಯಾಗಬೇಕಾಗಿಲ್ಲ. ಪ್ರಯೋಗಗಳು ಕೆಲವೊಮ್ಮೆ ಕೈಕೊಡುವುದು ಸಹಜ. ಇದು ಅಂಥದ್ದೇ ಒಂದು ದಿನವಾಗಿತ್ತು’ ಎಂದಿದ್ದಾರೆ.
ಆಸೀಸ್ ವಿರುದ್ಧದ ಮುಂದಿನೆರಡು ಏಕದಿನ ರೋಚಕವಾಗಿರಲಿವೆ. ಹಾಲಿ ಭಾರತ ತಂಡ ಬಲಿಷ್ಠವಾಗಿದೆ. ಮುಂಬೈನಲ್ಲಿ ಅದೊಂದು ಕೆಟ್ಟ ದಿನವಾಗಿತ್ತು. 2 ವರ್ಷಗಳ ಹಿಂದೆಯೂ ಭಾರತ ತಂಡ ಇಂಥ ಪರಿಸ್ಥಿತಿ ಎದುರಿಸಿತ್ತು ಮತ್ತು 0-2 ಹಿನ್ನಡೆಯಿಂದ ಮೇಲೆದ್ದಿತ್ತು. ಶುಭ ಹಾರೈಕೆಗಳು. | ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ