ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯಕ್ಕೆ ಉಭಯ ತಂಡಗಳು ಈಗಾಗಲೇ ಭರ್ಜರಿ ಸಿದ್ಧತೆಯನ್ನ ಮಾಡಿಕೊಂಡಿದ್ದು, ಕಪ್ಗಾಗಿ ಸೆಣಸಾಡಲಿವೆ. ಕಪ್ ಗೆಲ್ಲುವ ಹುಮ್ಮಸ್ಸಿನೊಂದಿಗೆ ಟೀಮ್ ಇಂಡಿಯಾ ತಯಾರಿ ನಡೆಸುತ್ತಿರುವ ನಡುವೆಯೇ ವಿರಾಟ್ ಕೊಹ್ಲಿ ಗಾಯಗೊಂಡಿದ್ದು ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಅಭ್ಯಾಸದ ಸಮಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದು, ನಂತರ ಅಭ್ಯಾಸವನ್ನು ನಿಲ್ಲಿಸಿದರು. ತಕ್ಷಣವೇ ವೈದ್ಯರ ತಂಡ ಅವರ ಗಾಯದ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಿದೆ ಎಂದು ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.
ಅಭ್ಯಾಸದ ವೇಳೆ ವೇಗದ ಬೌಲಿಂಗ್ ಎದುರಿಸುತ್ತಿದ್ದ ವಿರಾಟ್ ಅವರ ಮೊಣಕಾಲಿಗೆ ಚೆಂಡು ಬಡೆದಿದೆ ಎಂದು ಹೇಳಲಾಗಿದ್ದು, ತಕ್ಷಣವೇ ಅಭ್ಯಾಸವನ್ನು ನಿಲ್ಲಿಸಿ ಚಿಕಿತ್ಸೆಗೆಂದು ತೆರಳಿದ್ದಾರೆ. ಚಿಕಿತ್ಸೆ ಬಳಿಕ ವಿರಾಟ್ ಅಭ್ಯಾಸವನ್ನು ಮುಂದುವರೆಸಿಲ್ಲ ಎಂದು ತಿಳಿದು ಬಂದಿದ್ದು, ಬೇರೆ ಆಟಗಾರರ ಅಭ್ಯಾಸವನ್ನು ಗಮನಿಸುತ್ತಲೇ ಇದ್ದರು ಮತ್ತು ತಂಡದೊಂದಿಗೆ ಮೈದಾನದಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿ ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಆ ಬಳಿಕ ಫಿಟ್ ಆಗಿ ತಂಡಕ್ಕೆ ಮರಳಿದ್ದ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸದ್ಯ ವರದಿಯಾಗಿರುವ ಪ್ರಕಾರ ಗಾಯಕ್ಕೆ ತುತ್ತಾಗಿದ್ದ ವಿರಾಟ್ ಕೊಹ್ಲಿ ಫಿಟ್ ಆಗಿದ್ದು, ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯಕ್ಕೆ ಕಣಕ್ಕಿಳಿಯುವುದು ಪಕ್ಕಾ ಆಗಿದೆ.
ಹಾಲಿ ಟೂರ್ನಿಯಲ್ಲಿ (Champions Trophy) ಭಾರತದ ಪರ ಉತ್ತಮ ಪ್ರದರ್ಶನ ನೀಡಿರುವ ವಿರಾಟ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ನಂತರ ಸೆಮಿಫೈನಲ್‌ನಲ್ಲೂ ಕೊಹ್ಲಿ ಅತ್ಯುತ್ತಮ 84 ರನ್‌ಗಳನ್ನು ಗಳಿಸಿ ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ ಫೈನಲ್‌ಗೆ ಕೊಂಡೊಯ್ದರು. ಕೊಹ್ಲಿ ಈವರೆಗೆ ಟೂರ್ನಿಯ 4 ಇನ್ನಿಂಗ್ಸ್‌ಗಳಲ್ಲಿ 217 ರನ್ ಗಳಿಸಿದ್ದಾರೆ.