ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (Border Gavaskar Trophy Test Series) ಅಂತಿಮ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಉಭಯ ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 116 ರನ್ಗಳಿಗೆ 4ವಿಕೆಟ್ ಕಳೆದುಕೊಂಡಿದ್ದು, ಭಾರತೀಯ ಬೌಲರ್ಗಳು ಎದುರಾಳಿಗಳ ವಿರುದ್ಧ ಕೊಂಚ ಹಿಡಿತ ಸಾಧಿಸಿರುವ ನಡುವೆಯೇ ಟೀಮ್ ಇಂಡಿಯಾ ಮೇಲೆ ಗಂಭೀರ ಆರೋಪ ಒಂದು ಕೇಳಿ ಬಂದಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ ನೀಡಿದ ಭಾರತ ಬೌಲರ್ಗಳು ಅಪಾಯಕಾರಿ ಎನಿಸಿದ್ದ ಮೂವರು ಬ್ಯಾಟ್ಸ್ಮನ್ಗಳ ವಿಕೆಟ್ಗಳನ್ನು ಬೇಗನೆ ತೆಗೆದರು. ಇತ್ತ ಭಾರತದ ಬೌಲರ್ಗಳು ಬೇಗನೆ ವಿಕೆಟ್ ತೆಗೆಯುತ್ತಿದ್ದಂತೆ ಅತ್ತ ಆಸ್ಟ್ರೇಲಿಯಾದ ಅಭಿಮಾನಿಗಳು ಟೀಮ್ ಇಂಡಿಯಾದ ಆಟಗಾರರು ಸ್ಯಾಂಡ್ ಪೇಪರ್ ಬಳಸುತ್ತಿದ್ದಾರೆ ಎಂಬ ಗಂಭೀರ ಆರೋಪ ಒಂದನ್ನು ಮಾಡಿದ್ದು, ಇದಕ್ಕೆ ಹಂಗಾಮಿ ನಾಯಕ ವಿರಾಟ್ ಕೊಹ್ಲಿ (Virat Kohli) ನೀಡಿರುವ ರಿಯಾಕ್ಷನ್ ಸಖತ್ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದ ಫ್ಯಾನ್ಸ್ ಆರೋಪ ಮಾಡುತ್ತಿದ್ದಂತೆ ತಕ್ಷಣವೇ ರಿಯಾಕ್ಟ್ ಮಾಡಿದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ (Virat Kohli), ತಮ್ಮ ಕಾಲಿ ಜೇಬನ್ನು ತೋರಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತದ ಅಭಿಮಾನಿಗಳು ಹಿಂದಿನ ಘಟನೆಯನ್ನು ಉಲ್ಲೇಖಿಸುವ ಮೂಲಕ ಆಸ್ಟ್ರೇಲಿಯಾ ಫ್ಯಾನ್ಸ್ಗೆ ತಿರುಗೇಟು ನೀಡಿದ್ದಾರೆ.
2018ರಲ್ಲಿ ಆಸ್ಟ್ರೇಲಿಯನ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ನಿಷೇಧಕ್ಕೊಳಗಾಗುವ ಮೂಲಕ ವಿಶ್ವದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇದೀಗ ಟೀಮ್ ಇಂಡಿಯಾ ಮೇಲೆ ಆಸ್ಟ್ರೇಲಿಯಾದ ಫ್ಯಾನ್ಸ್ ಆರೋಪ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಸಿಡ್ನಿ ಟೆಸ್ಟ್ ಪಂದ್ಯವು ರೋಚಕ ಘಟ್ಟ ತಲುಪಿದ್ದು, ಮೂರನೇ ದಿನದಾಟಕ್ಕೆ ಮ್ಯಾಚ್ ಮುಕ್ತಾಯವಾಗುವುದು ಬಹುತೇಕ ಖಾತ್ರಿಯಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ರನ್ ಗಳಿಸಲು ಪರದಾಡಿದ್ದ ಭಾರತ ತಂಡವು (Team India) ಎರಡನೇ ಇನ್ನಿಂಗ್ಸ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡಿತ್ತು. ಪ್ರಸ್ತುತ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಮಾಡುತ್ತಿದ್ದು, 4 ವಿಕೆಟ್ ನಷ್ಟಕ್ಕೆ 116 ರನ್ಗಳಿಸಿದೆ.