ದೆಹಲಿ: ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ವೈಯಕ್ತಿಕ 7000 ರನ್ ಕಲೆಹಾಕುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ನಲ್ಲಿ 7000 ರನ್ ಕಲೆಹಾಕಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ನಿನ್ನೆ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಈ ವಿಶಿಷ್ಟ ಸಾಧನೆ ಮಾಡಿದರು.
ಇದೇ ಪಂದ್ಯದಲ್ಲಿ ಇನ್ನೊಂದು ದಾಖಲೆ ಬರೆದ ಕೊಹ್ಲಿ, ದೆಹಲಿ ವಿರುದ್ಧ 1000 ರನ್ಗಳನ್ನು ಬಾರಿಸಿದ ಏಕೈಕ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಅಲ್ಲದೇ, ಪ್ರಸಕ್ತ ಐಪಿಎಲ್ನಲ್ಲಿ 10 ಪಂದ್ಯಗಳ ಮೂಲಕ 419 ರನ್ಗಳನ್ನು ಬಾರಿಸಿರುವ ಕೊಹ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
2008ರಿಂದ ಬೆಂಗಳೂರು ತಂಡದ ಪರವಾಗಿ ಆಟವಾಡುತ್ತಿರುವ ವಿರಾಟ್, ಈವರೆಗೆ 233 ಪಂದ್ಯಗಳ ಮೂಲಕ 5 ಶತಕ ಮತ್ತು 49 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್ ನಲ್ಲಿ ಅತ್ಯಧಿಕ ರನ್ನುಗಳನ್ನು ಬಾರಿಸಿದವರ ಪೈಕಿ ವಿರಾಟ್ 7043 ರನ್ಗಳಿಸಿ ಮೊದಲನೇ ಸ್ಥಾನದಲ್ಲಿದ್ದಾರೆ.
ಶಿಖರ್ ಧವನ್ 6,536 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿ ಹಾಗೂ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ 6189 ರನ್ ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.(ಏಜೆನ್ಸೀಸ್)