ಮುಂಬೈ: ಮೊದಲ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ 2ನೇ ಟೆಸ್ಟ್‌ನಲ್ಲಿ ಸಾಕಷ್ಟು ಭರವಸೆಯೊಂದಿಗೆ ಕಣಕ್ಕಿಳಿದರೂ ಕನಿಷ್ಠ ಖಾತೆ ತೆರೆಯಲು ವಿಫಲರಾದರು. ಸ್ಪಿನ್ನರ್ ಅಜಾಜ್ ಪಟೇಲ್ ಎಸೆತವನ್ನು ರಕ್ಷಣಾತ್ಮವಾಗಿ ಆಡಲು ಯತ್ನಿಸಿದಾಗ ಇನ್ನರ್ ಎಡ್ಜ್ ಆದ ಚೆಂಡು ಪ್ಯಾಡ್‌ಗೆ ಬಡಿಯಿತು. ಆಗ ಅಜಾಜ್ ಮಾಡಿದ ಎಲ್‌ಬಿ ಮನವಿಯನ್ನು ಅಂಪೈರ್ ಪುರಸ್ಕರಿಸಿದರು. ಇದರ ವಿರುದ್ಧ ಕೊಹ್ಲಿ ಡಿಆರ್‌ಎಸ್ ಮೊರೆ ಹೋದರು. ಆದರೆ ಮೂರನೇ ಅಂಪೈರ್ ವೀರೇಂದ್ರ ಶರ್ಮಗೆ ಚೆಂಡಿಗೆ ಬ್ಯಾಟ್ ಮೊದಲು ಸ್ಪರ್ಶಿಸಿತೋ, ಪ್ಯಾಡ್ ಸ್ಪರ್ಶಿಸಿತೋ ಎಂಬುದು ಸ್ಪಷ್ಟತೆ ಸಿಗಲಿಲ್ಲ. ಇದರಿಂದ ಮೈದಾನದ ಅಂಪೈರ್ ಅನಿಲ್ ಚೌಧರಿ ತಮ್ಮ ತೀರ್ಪನ್ನು ಸಮರ್ಥಿಸಿಕೊಂಡರು. ಆದರೆ ಟಿವಿ ಮರುಪ್ರಸಾರದಲ್ಲಿ ಚೆಂಡು ಬ್ಯಾಟ್‌ಗೆ ಇನ್ನರ್ ಎಡ್ಜ್ ಆದಂತೆ ಕಾಣಿಸುತ್ತಿತ್ತು.
ಕೊಹ್ಲಿ ತೀರ್ಪಿನ ವಿರುದ್ಧ ಅಸಮಾಧಾನ ಹೊರಹಾಕಿ, ನಿರಾಸೆಯೊಂದಿಗೆ ಮೈದಾನದಿಂದ ಹೊರನಡೆದರು. ಡ್ರೆಸ್ಸಿಂಗ್ ರೂಂನಲ್ಲೂ ಕೋಚ್ ದ್ರಾವಿಡ್ ಎದುರು ಬೇಸರ ಹೊರಹಾಕಿದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಟೀಕಾಸವೇ ಹರಿಯಿತು. ‘ಥರ್ಡ್ ಅಂಪೈರ್’ ಅಲ್ಲ ‘ಥರ್ಡ್ ಕ್ಲಾಸ್ ಅಂಪೈರ್’ ಎಂದು ಮಾಜಿ ಕ್ರಿಕೆಟಿಗರು ಮತ್ತು ಕ್ರಿಕೆಟ್ ಪ್ರೇಮಿಗಳು ಟೀಕಿಸಿದ್ದಾರೆ.
ಕರ್ನಾಟಕದ ಬ್ಯಾಟರ್ ಮಯಾಂಕ್ ಅಗರ್ವಾಲ್ (120*ರನ್, 246 ಎಸೆತ, 14 ಬೌಂಡರಿ, 4 ಸಿಕ್ಸರ್) ಮನಮೋಹಕ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಆಸರೆಯಾಗಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಉತ್ತಮ ಆರಂಭದ ನಡುವೆಯೂ ಪ್ರವಾಸಿ ತಂಡದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ (73ಕ್ಕೆ 4) ಮಾರಕ ದಾಳಿಗೆ ತತ್ತರಿಸಿತು. ಬಳಿಕ ಮಯಾಂಕ್ ಏಕಾಂಗಿ ನಿರ್ವಹಣೆ ಫಲವಾಗಿ ಭಾರತ ತಂಡ ಮೊದಲ ದಿನದಂತ್ಯಕ್ಕೆ 70 ಓವರ್‌ಗಳಲ್ಲಿ 4 ವಿಕೆಟ್‌ಗೆ 221 ರನ್ ಕಲೆಹಾಕಿದೆ.