ವಿರಾಟ್ ಕೊಹ್ಲಿ, ರೋಹಿತ್​ ಶರ್ಮ ಏಜೆನ್ಸಿ
ಕ್ರೀಡೆ

ವಿರಾಟ್​ ಕೊಹ್ಲಿ 15 ಸಾವಿರ, ರೋಹಿತ್​ ಶರ್ಮ 12 ಸಾವಿರ ರನ್​ ಸನಿಹ!

ಕೊಹ್ಲಿ ಇನ್ನು 59 ರನ್​ ಗಳಿಸಿದರೆ 15 ಸಾವಿರ ರನ್​ ಪೂರೈಸಿದ 2ನೇ ಬ್ಯಾಟರ್ ಎನಿಸಲಿದ್ದಾರೆ

ತಿರುವನಂತಪುರ: ಅನುಭವಿ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಕ್ರಮವಾಗಿ 15 ಸಾವಿರ ಮತ್ತು 12 ಸಾವಿರ ರನ್​ ಪೂರೈಸುವ ಅವಕಾಶ ಹೊಂದಿದ್ದಾರೆ.

37 ವರ್ಷದ ವಿರಾಟ್​ ಕೊಹ್ಲಿ ಇದುವರೆಗೆ ಆಡಿರುವ 314 ಏಕದಿನ ಪಂದ್ಯಗಳಲ್ಲಿ 14,941 ರನ್​ ಗಳಿಸಿದ್ದು, ಇನ್ನು 59 ರನ್​ ಗಳಿಸಿದರೆ ದಿಗ್ಗಜ ಸಚಿನ್​ ತೆಂಡುಲ್ಕರ್​ (18,426) ಬಳಿಕ ಏಕದಿನ ಕ್ರಿಕೆಟ್​ನಲ್ಲಿ 15 ಸಾವಿರ ರನ್​ ಪೂರೈಸಿದ 2ನೇ ಬ್ಯಾಟರ್​ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​ 387 ಪಂದ್ಯ, 377 ಇನಿಂಗ್ಸ್​ಗಳಲ್ಲಿ 15 ಸಾವಿರ ರನ್​ ಪೂರೈಸಿದ್ದರೆ, ಕೊಹ್ಲಿ ಅದಕ್ಕಿಂತ ಸುಮಾರು 62 ಪಂದ್ಯ ಮತ್ತು 75 ಇನಿಂಗ್ಸ್​ ಬೇಗನೆ ಈ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ.

39 ವರ್ಷದ ರೋಹಿತ್​ ಶರ್ಮ ಇದುವರೆಗೆ ಆಡಿರುವ 288 ಪಂದ್ಯಗಳಲ್ಲಿ 11,895 ರನ್​ ಗಳಿಸಿದ್ದು, ಇನ್ನು 105 ರನ್​ ಗಳಿಸಿದರೆ 12 ಸಾವಿರ ರನ್​ ಪೂರೈಸಿದ 3ನೇ ಭಾರತೀಯ ಮತ್ತು ವಿಶ್ವದ 7ನೇ ಬ್ಯಾಟರ್​ ಎನಿಸಲಿದ್ದಾರೆ.

ಮುತ್ತೂಟ್​ ಶೀರ್ಷಿಕೆ ಪ್ರಾಯೋಜಕತ್ವ

ನಾನ್​-ಬ್ಯಾಂಕಿಂಗ್​ ಹಣಕಾಸು ಕಂಪನಿಯಾದ ಮುತ್ತೂಟ್​ ಫಿನ್​ಕಾರ್ಪ್​, ಭಾರತ ತಂಡದ ತವರಿನ ಕ್ರಿಕೆಟ್​ ಸರಣಿಗಳಿಗೆ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿದೆ. ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಿಂದ 2028ರ ಮಾರ್ಚ್​ 31ರವರೆಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿದ್ದು, ಶನಿವಾರ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ. ಪ್ರತಿ ಪಂದ್ಯಕ್ಕೆ 4.3 ಕೋಟಿ ರೂ.ನಂತೆ ಒಟ್ಟು 150 ಕೋಟಿ ರೂ. ಮೊತ್ತದ ಒಪ್ಪಂದ ಇದಾಗಿದೆ ಎನ್ನಲಾಗಿದೆ. ಮುಂದಿನ 2 ವರ್ಷ ಭಾರತ ತವರಿನಲ್ಲಿ ಆಡಲಿರುವ ಒಟ್ಟು 35 ಪಂದ್ಯಗಳ (10 ಟೆಸ್ಟ್​, 12 ಏಕದಿನ, 13 ಟಿ20) ಜತೆಗೆ ದೇಶೀಯ ಕ್ರಿಕೆಟ್​ ಪಂದ್ಯಗಳೂ ಈ ಒಪ್ಪಂದಕ್ಕೆ ಒಳಪಟ್ಟಿವೆ.