ನವದೆಹಲಿ: ಭಾರತೀಯ ಕ್ರಿಕೆಟ್ ಚಟುವಟಿಕೆ ಸ್ತಬ್ಧಗೊಂಡು 4 ತಿಂಗಳುಗಳೇ ಕಳೆದುಹೋಗಿವೆ. ಇದರ ನಡುವೆಯೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ದಿನ ಒಟ್ಟಾರೆ 10 ಗಂಟೆಗಳ ಕಾಲ ಎಲ್ಲರ ಮನೆಯ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ! ಹೌದು, ವಿವಿಧ ಬ್ರಾಂಡ್ಗಳ ಜಾಹೀರಾತುಗಳ ಮೂಲಕ ವಿರಾಟ್ ಕೊಹ್ಲಿ ಕಳೆದ ಏಪ್ರಿಲ್ನಿಂದ ಜೂನ್ವರೆಗೆ ಪ್ರತಿದಿನ 10 ಗಂಟೆಗಳ ಕಾಲ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಟಿಎಎಂ ಆಡ್ಎಕ್ಸ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಅವರು 2020ರ ಏಪ್ರಿಲ್ನಿಂದ ಜೂನ್ವರೆಗೆ ಅತಿ ಹೆಚ್ಚು ಸಮಯ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಭಾರತದ ಸೆಲೆಬ್ರಿಟಿಯಾಗಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಇದ್ದಾರೆ. ಇವರಿಬ್ಬರು ಕ್ರಮವಾಗಿ ಪ್ರತಿದಿನ 9 ಮತ್ತು 8 ಗಂಟೆಗಳ ಕಾಲ ಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿವಿಧ ಬ್ರಾಂಡ್ಗಳ ಜಾಹೀರಾತುಗಳು, ವಿವಿಧ ಚಾನಲ್ಗಳಲ್ಲಿ ಪ್ರಸಾರವಾಗುವ ಒಟ್ಟಾರೆ ಸಮಯದ ಆಧಾರದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ.
ಆದರೆ ವಿವಿಧ ಬಗೆಯ ಉತ್ಪನ್ನಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 17 ಬಗೆಯ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. 2020ರ ಜನವರಿಯಿಂದ ಮಾರ್ಚ್ವರೆಗೆ 18 ಬಗೆಯ ಉತ್ಪನ್ನಗಳ ಪ್ರಚಾರ ಮಾಡುತ್ತಿದ್ದ್ ಕೊಹ್ಲಿ ಈಗ 11 ಬಗೆಯ ಉತ್ಪನ್ನಗಳ ಜಾಹೀರಾತಿನಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಕೆಲ ಉತ್ಪನ್ನಗಳ ಮಾರಾಟ ಸಂಪೂರ್ಣವಾಗಿ ನಿಂತಿರುವುದು ಇದಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ಎಂಎಸ್ಧೋನಿ 12, ಕರೀನಾ ಕಪೂರ್ 9, ಅನಿಲ್ ಕಪೂರ್ 7, ವರುಣ್ ಧವನ್ 5, ಕಿಯಾರ ಆಡ್ವಾಣಿ 4, ಆಲಿಯಾ ಭಟ್ 8, ಅಮಿತಾಭ್ ಬಚ್ಚನ್ 10 ಮತ್ತು ಶಾರುಖ್ ಖಾನ್ 2 ಬಗೆಯ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ವರದಿಯ ಪ್ರಕಾರ ಕಳೆದ ತ್ರೈಮಾಸಿಕದಲ್ಲಿ, ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳಲ್ಲಿ ನಟಿಯರೇ ಹೆಚ್ಚಾಗಿದ್ದಾರೆ. ಏಪ್ರಿಲ್ನಿಂದ ಜೂನ್ವರೆಗೆ ಶೇ. 45ರಷ್ಟು ನಟಿಯರನ್ನೇ ಒಳಗೊಂಡ ಜಾಹೀರಾತುಗಳು ಪ್ರಸಾರವಾಗಿದ್ದರೆ, ಶೇ. 36 ನಟರಿಗೆ ಸೇರಿದ್ದಾಗಿದೆ. ಕ್ರೀಡಾಪಟುಗಳು ಇರುವ ಜಾಹೀರಾತುಗಳು ಶೇ. 15ರಷ್ಟು ಪ್ರಸಾರವಾಗಿದ್ದರೆ, ಶೇ. 4ರಷ್ಟು ಟಿವಿ ನಟಿಯರು ಮತ್ತು ಶೇ. 2ರಷ್ಟು ಟಿವಿ ನಟರ ಜಾಹೀರಾತುಗಳು ಪ್ರಸಾರವಾಗಿವೆ.