ಕ್ರೀಡೆ

ವಿರಾಟ್ ಕೊಹ್ಲಿಗೆ ಸ್ವಹಿತಾಸಕ್ತಿ ಸಂಕಷ್ಟ! ಹೂಡಿಕೆಯಿಂದ ಇಕ್ಕಟ್ಟು, ಬಿಸಿಸಿಐ ಎಥಿಕ್ಸ್ ಅಧಿಕಾರಿಗೆ ಸಂಜಯ್ ಗುಪ್ತಾ ದೂರು

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಈಗ ಸ್ವಹಿತಾಸಕ್ತಿ ಸಂಘರ್ಷದ ಸಂಕಷ್ಟ ಎದುರಾಗಿದೆ. ಈಗಾಗಲೆ ಭಾರತೀಯ ಕ್ರಿಕೆಟ್​ನ ದಿಗ್ಗಜರಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಸ್ವಹಿತಾಸಕ್ತಿ ಸಂಘರ್ಷದ ಆರೋಪಗಳನ್ನು ಎದುರಿಸಿದ್ದರು. ಇದೀಗ ಕರೊನಾ ಹಾವಳಿಯಿಂದ ಕ್ರಿಕೆಟ್ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ನಡುವೆ ಕೊಹ್ಲಿ ವಿರುದ್ಧವೂ ಆರೋಪ ಕೇಳಿಬಂದಿದೆ. ಅವರು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವುದೇ ಇದಕ್ಕೆ ಕಾರಣವಾಗಿದೆ. ಈ ಹಿಂದೆ ದಿಗ್ಗಜ ಆಟಗಾರರ ವಿರುದ್ಧ ದೂರು ನೀಡಿದ್ದ ಮಧ್ಯಪ್ರದೇಶ ಕ್ರಿಕಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ ಅವರೇ ಕೊಹ್ಲಿ ವಿರುದ್ಧವೂ ಬಿಸಿಸಿಐ ಎಥಿಕ್ಸ್ ಅಧಿಕಾರಿ ಡಿಕೆ ಜೈನ್​ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಬಿಸಿಸಿಐ ಸಂವಿಧಾನವನ್ನು ಸಮಗ್ರವಾಗಿ ಬದಲಾಯಿಸಿದ ಬಳಿಕ ಸ್ವಹಿತಾಸಕ್ತಿ ಸಂಘರ್ಷದ ಆರೋಪಗಳು ಕ್ರಿಕೆಟಿಗರನ್ನು ಸಂಕಷ್ಟಕ್ಕೆ ಸಿಲುಕಿಸುತ್ತ ಬಂದಿದೆ. ಎಂಎಸ್ ಧೋನಿ ಟೀಮ್ ಇಂಡಿಯಾ ನಾಯಕರಾಗಿದ್ದಾಗಲೂ ಸ್ವಹಿತಾಸಕ್ತಿ ಸಂಘರ್ಷದ ಆರೋಪಗಳನ್ನು ಎದುರಿಸಿದ್ದರು. ಸುಪ್ರೀಂ ಕೋರ್ಟ್ ಅಂಗೀಕರಿಸಿರುವ ಲೋಧಾ ಸಮಿತಿಯ ಶಿಫಾರಸುಗಳ ಅನ್ವಯ ಯಾವುದೇ ವ್ಯಕ್ತಿ ಏಕಕಾಲದಲ್ಲಿ 2 ಹುದ್ದೆಗಳನ್ನು ಅಲಂಕರಿಸುವಂತಿಲ್ಲ. ಆದರೆ ವಿರಾಟ್ ಕೊಹ್ಲಿ 2 ಹುದ್ದೆಗಳಲ್ಲಿದ್ದಾರೆ. ಇದು ಬಿಸಿಸಿಐ ನಿಯಮ 38(4)ರ ಉಲ್ಲಂಘನೆಯಾಗಿದೆ ಎಂದು ಸಂಜೀವ್ ಗುಪ್ತಾ ದೂರಿದ್ದಾರೆ.

ವಿರಾಟ್ ಕೊಹ್ಲಿ ಅವರು ‘ವಿರಾಟ್ ಕೊಹ್ಲಿ ಸ್ಪೋರ್ಟ್ಸ್ ಎಲ್​ಎಲ್​ಪಿ’ ಕಂಪನಿಯ ಇಬ್ಬರು ಮಾಲೀಕರು/ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇನ್ನೊಬ್ಬರು ಅಮಿತ್ ಅರುಣ್ ಸಜ್​ದೇ. ಇದರ ಜತೆಗೆ ಕೊಹ್ಲಿ ಅವರು ‘ಕಾರ್ನರ್​ಸ್ಟೋನ್ ವೆನ್ಚರ್ ಪಾಟ್ನರ್​ಶಿಪ್ ಎಲ್​ಎಲ್​ಪಿ’ ಸಂಸ್ಥೆಯ ಮೂವರು ಮಾಲೀಕರು/ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಇನ್ನಿಬ್ಬರು ಅಮಿತ್ ಅರುಣ್ ಸಜ್​ದೇ ಮತ್ತು ಬಿನೋಯ್ ಭರತ್ ಖಿಮ್ಜಿ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಪ್ರಭಾವದ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಆದರೆ ಯಾರೂ ಕಾನೂನಿಗಿಂತ ಮೇಲಲ್ಲ. ನನ್ನ ದೂರಿನಲ್ಲಿ ಯಾವುದೇ ಅಜೆಂಡಾ ಅಥವಾ ಸ್ವಹಿತಾಸಕ್ತಿ ಇಲ್ಲ ಎಂದು ಸಂಜೀವ್ ಗುಪ್ತಾ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಚಾರ ಪಡೆಯುವ ತಂತ್ರ: ಪ್ರಚಾರ ಪಡೆಯುವ ಉದ್ದೇಶದಿಂದ ಇಂಥದ್ದೊಂದು ದೂರು ನೀಡಲಾಗಿದೆ. ಇಂಥ ದೂರಿನಿಂದ ಆಟಗಾರರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅವರಿಗೆ ಚಿಂತೆ ಇಲ್ಲ. ಆಟಗಾರರು ಇಂಥ ವಿಷಯಗಳ ಬಗ್ಗೆ ಆಡುವಾಗಲೂ ಚಿಂತಿಸುತ್ತಿದ್ದರೆ ಅವರ ಆಟದ ಮೇಲೆ ಅದು ಪರಿಣಾಮ ಬೀರುತ್ತದೆ. ಇಂಥ ದೂರುಗಳು ಕ್ರಿಕೆಟ್ ಹಿತದೃಷ್ಟಿಯಿಂದ ಉತ್ತಮವಾದುದಲ್ಲ ಎಂದು ವಿರಾಟ್ ಕೊಹ್ಲಿ ಅವರ ಆಪ್ತಮೂಲಗಳು ತಿಳಿಸಿವೆ. ಬಿಸಿಸಿಐ ಅಧಿಕಾರಿಯೊಬ್ಬರು ಕೂಡ ಈ ದೂರು, ಆಟಗಾರರ ಹೆಸರು ಕೆಡಿಸುವ ಪ್ರಯತ್ನವಾಗಿದೆ. ಬ್ಲಾ್ಯಕ್​ವೆುೕಲ್ ತಂತ್ರಗಳ ಭಾಗವೂ ಆಗಿದೆ. ಇದರ ಹಿಂದೆ ಬೆಟ್ಟಿಂಗ್ ಸಿಂಡಿಕೇಟ್ ಕೂಡ ಕೆಲಸ ಮಾಡಿರಬಹುದು. ಕಳೆದ 6 ವರ್ಷಗಳಿಂದಲೂ ಈ ರೀತಿಯ ದೂರುಗಳ ಮೂಲಕ ಪ್ರಚಾರ ಪಡೆದುಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಹಲವು ಆಟಗಾರರ ಜತೆ ಒಪ್ಪಂದವಿರುವ ಕಂಪನಿ ಕೊಹ್ಲಿ ನಿರ್ದೇಶಕರಾಗಿದ್ದಾರೆ ಎಂದು ಆರೋಪಿಸಲಾದ ಕಾರ್ನರ್​ಸ್ಟೋನ್ ಸ್ಪೋರ್ಟ್ಸ್ ಕಂಪನಿ ಭಾರತ ತಂಡದ ಕೆಎಲ್ ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜಾ, ಉಮೇಶ್ ಯಾದವ್ ಮತ್ತು ಕುಲದೀಪ್ ಯಾದವ್ ಅವರ ವಾಣಿಜ್ಯ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತದೆ. ಆದರೆ ಈ ಕಂಪನಿ ಆಡಳಿತದಲ್ಲಿ ಕೊಹ್ಲಿ ಯಾವುದೇ ಪಾತ್ರ ಹೊಂದಿಲ್ಲ ಎನ್ನಲಾಗಿದೆ.

ದೂರು ಪರಿಶೀಲಿಸುವೆ ಎಂದ ಡಿಕೆ ಜೈನ್: ವಿರಾಟ್ ಕೊಹ್ಲಿ ವಿರುದ್ಧದ ಸ್ವಹಿತಾಸಕ್ತಿ ದೂರಿನ ಬಗ್ಗೆ ಪರಿಶೀಲನೆ ನಡೆಸುವುದಾಗಿ ಬಿಸಿಸಿಐ ಎಥಿಕ್ಸ್ ಅಧಿಕಾರಿ ಡಿಕೆ ಜೈನ್ ತಿಳಿಸಿದ್ದಾರೆ. ‘ನನಗೆ ದೂರು ಬಂದಿರುವುದು ನಿಜ. ನಾನದನ್ನು ಪರಿಶೀಲಿಸುವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಬೇಕೇ, ಬೇಡವೇ ಎಂಬುದನ್ನು ನಂತರ ನಿರ್ಧರಿಸುವೆ. ಪ್ರಕರಣ ದಾಖಲಿಸಿಕೊಂಡರೆ, ಕೊಹ್ಲಿಗೂ ಉತ್ತರ ನೀಡುವ ಅವಕಾಶ ಕಲ್ಪಿಸುವೆ’ ಎಂದು ಡಿಕೆ ಜೈನ್ ಹೇಳಿದ್ದಾರೆ. ಪ್ರಕರಣ ದಾಖಲಾದರೆ ಕೊಹ್ಲಿ ವಿಚಾರಣೆಗೂ ಹಾಜರಾಗಬೇಕಾಗುತ್ತದೆ.