ಕ್ರೀಡೆ

ಶ್ರೀಲಂಕಾದಲ್ಲಿ ವಿರಾಟ್​ ಕೊಹ್ಲಿಗೆ ಭಾರಿ ಅವಮಾನ: ಸಿಟ್ಟಿಗೆದ್ದ ಕಿಂಗ್​ ಕೊಹ್ಲಿ ಏನ್​ ಮಾಡಿದ್ರು ನೋಡಿ…

ನವದೆಹಲಿ: ಶ್ರೀಲಂಕಾ ವಿರುದ್ಧ ನಡೆದ ಮೂರು ಟಿ20 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಬಳಿಕ ಟೀಮ್​ ಇಂಡಿಯಾ ಆಟಗಾರರಲ್ಲಿ ಉತ್ಸಾಹ ನೂರ್ಮಡಿಯಾಗಿದೆ. ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನೂತನ ಟಿ20 ನಾಯಕ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಮೊದಲ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಅದರಲ್ಲೂ ಸೋಲಿನ ದವಡೆಯಲ್ಲಿ ಸಿಲುಕಿದ್ದ ಮೂರನೇ ಪಂದ್ಯವನ್ನು ಸೂಪರ್ ಓವರ್‌ಗೆ ತೆಗೆದುಕೊಂಡು ಹೋಗಿ ಅದನ್ನೂ ಗೆದ್ದು ಪವಾಡ ಮಾಡಲಾಗಿದೆ.

ಟಿ20 ಸರಣಿ ಗೆಲುವಿನ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದೀಗ ಏಕದಿನ ಸರಣಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿಯಂತಹ ಸ್ಟಾರ್​ಗಳು ಲಂಕಾ ವಿರುದ್ಧ ಏಕದಿನ ಸರಣಿ ಆಡಲಿದ್ದಾರೆ. ಈ ಸರಣಿಗಾಗಿ ಕೊಹ್ಲಿ ಈಗಾಗಲೇ ಲಂಕಾವನ್ನು ತಲುಪಿದ್ದಾರೆ. ಇದರ ನಡುವೆಯೇ ವಿರಾಟ್ ಕೊಹ್ಲಿ ತೀವ್ರ ಅವಮಾನಕ್ಕೊಳಗಾದ ಪ್ರಸಂಗವೂ ಜರುಗಿದೆ.

ವೆಸ್ಟ್​ಇಂಡೀಸ್​-ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ನಂತರ ಲಂಕಾ ವಿರುದ್ಧದ ಏಕದಿನ ಸರಣಿಯೊಂದಿಗೆ ಕೊಹ್ಲಿ ಮತ್ತೆ ಕ್ರೀಸ್​ಗೆ ಇಳಿಯುತ್ತಿದ್ದಾರೆ. ಸರಣಿಯಲ್ಲಿ ಪಾಲ್ಗೊಳ್ಳಲು ಸೋಮವಾರ ಸಂಜೆ ಲಂಕಾ ತಲುಪಿದ ವಿರಾಟ್ ಕೊಹ್ಲಿ, ಮಂಗಳವಾರ ಕೊಲಂಬೊ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಭ್ಯಾಸದಲ್ಲಿ ಪಾಲ್ಗೊಂಡರು.

ಸ್ಟೇಡಿಯಂನಲ್ಲಿ ಉಳಿದ ಭಾರತೀಯ ಕ್ರಿಕೆಟಿಗರೊಂದಿಗೆ ಕೊಠಡಿಯಲ್ಲಿದ್ದಾಗ ವ್ಯಕ್ತಿಯೊಬ್ಬ ವಿರಾಟ್ ಕೊಹ್ಲಿಯನ್ನು ‘ಚೋಕ್ಲಿ’ ಎಂದು ಕರೆದಿದ್ದಾನೆ. ಅದನ್ನು ಕೇಳಿದ ವಿರಾಟ್ ಕೊಹ್ಲಿ ಆ ವ್ಯಕ್ತಿಯತ್ತ ತಿರುಗಿ ಏನೋ ಹೇಳಿದರು. ಅಲ್ಲದೆ, ಸಹ ಆಟಗಾರರ ಎದುರೇ ಹಾಗೆ ಕರೆದಿದ್ದಕ್ಕೆ ಕೊಹ್ಲಿ ಕೋಪ ಮಾಡಿಕೊಂಡರು. ವೈರಲ್​ ವಿಡಿಯೋ ನೋಡಿದರೆ, ಈ ದೃಶ್ಯ ಅರ್ಥವಾಗುತ್ತದೆ. ಕೊಹ್ಲಿ ಬ್ಯಾಟಿಂಗ್​ನಲ್ಲಿ ವಿಫಲವಾದ ಸಂದರ್ಭದಲ್ಲಿ ಕೆಲವರು ಜಾಲತಾಣದಲ್ಲಿ ಕೊಹ್ಲಿಯನ್ನು ಚೋಕ್ಲಿ ಎಂದು ಕರೆದು ಟ್ರೋಲ್​ ಮಾಡುತ್ತಾರೆ. ಅದೇ ಪದವನ್ನು ಲಂಕಾದಲ್ಲೂ ಕೇಳಿಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕೊಹ್ಲಿ, ಚೋಕ್ಲಿ ಎಂದು ಕರೆದವನನ್ನು ಸ್ಥಳದಿಂದ ಹೊರಗೆ ಕಳುಹಿಸುವಂತೆ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದರು ಎಂದು ವರದಿಯಾಗಿದೆ.

ಅಂದಹಾಗೆ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದಿದೆ. ಇದೀಗ ಲಂಕಾ ವಿರುದ್ಧ ಏಕದಿನ ಸರಣಿ ಆಡಲು ಕೊಹ್ಲಿ ಮೈದಾನ ಪ್ರವೇಶಿಸಲಿದ್ದಾರೆ. ಲಂಕಾ ವಿರುದ್ಧದ ಮೂರು ಏಕದಿನ ಸರಣಿಯು ಆಗಸ್ಟ್ 2 ರಿಂದ ಪ್ರಾರಂಭವಾಗಲಿದ್ದು, 2, 4 ಮತ್ತು 7 ರಂದು ಮೂರು ಪಂದ್ಯಗಳು ನಡೆಯಲಿವೆ. ಭಾರತ-ಶ್ರೀಲಂಕಾ ತಂಡಗಳು ಎಲ್ಲ ಮೂರು ಪಂದ್ಯಗಳನ್ನು ಕೊಲಂಬೊ ಮೈದಾನದಲ್ಲಿ ಆಡಲಿವೆ. (ಏಜೆನ್ಸೀಸ್​)