ಕ್ರೀಡೆ

ಐಪಿಎಲ್​ಗೆ ಹೊಸ ಕಿಟ್​ ರೆಡಿ ಮಾಡಿಕೊಂಡ ಆರ್​ಸಿಬಿ ನಾಯಕ ಕೊಹ್ಲಿ

ಬೆಂಗಳೂರು: ಐಪಿಎಲ್​ಗೆ ಯುಎಇಯಲ್ಲಿ ವೇದಿಕೆ ಸಜ್ಜಾಗುತ್ತಿರುವ ನಡುವೆ ಎಲ್ಲ ಫ್ರಾಂಚೈಸಿಗಳಿಂದ ಭರ್ಜರಿ ಸಿದ್ಧತೆ ನಡೆಯುತ್ತಿವೆ. ಆಟಗಾರರು ಕೂಡ ಐಪಿಎಲ್​ ಟೂರ್ನಿಯಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದಾರೆ. 13ನೇ ಆವೃತ್ತಿಯಲ್ಲಾದರೂ ಆರ್​ಸಿಬಿಗೆ ಪ್ರಶಸ್ತಿ ಗೆಲ್ಲಿಸಿಕೊಡುವ ಹಂಬಲದಲ್ಲಿರುವ ನಾಯಕ ವಿರಾಟ್​ ಕೊಹ್ಲಿ ಕೂಡ ಹೊಸ ಕಿಟ್​ನೊಂದಿಗೆ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದಾರೆ.

ಹೊಸ ಬ್ಯಾಟ್​ಗಳು ಮತ್ತು ಕೆಂಪುಬಣ್ಣದ ಪ್ಯಾಡ್​ಗಳನ್ನು ಸಿದ್ಧ ಮಾಡಿಕೊಂಡಿರುವ ಚಿತ್ರವನ್ನು ವಿರಾಟ್​ ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಶನಿವಾರ ಪ್ರಕಟಿಸಿದ್ದು, ಐಪಿಎಲ್​ನಲ್ಲಿ ಆಡಲು ಕಾತರದಿಂದ ಇರುವ ಸೂಚನೆ ರವಾನಿಸಿದ್ದಾರೆ.

ಕರೊನಾ ವೈರಸ್​ ಹಾವಳಿ ಮತ್ತು ಲಾಕ್​ಡೌನ್​ ಸಮಯದಲ್ಲಿ ಮುಂಬೈನ ಮನೆಯಲ್ಲೇ ಬಂಧಿಯಾಗಿದ್ದ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮ ಜತೆ ಮತ್ತು ಪುಸ್ತಕ ಓದುವುದರಲ್ಲಿ ಕಾಲ ಕಳೆದಿದ್ದರು. ಈ ನಡುವೆ ಜಿಮ್​ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಫಿಟ್ನೆಸ್​ ಮೇಲೆಯೂ ಹೆಚ್ಚಿನ ಗಮನಹರಿಸಿದ್ದರು. ಆದರೆ ಬ್ಯಾಟ್​ ಹಿಡಿದು ಅಭ್ಯಾಸಕ್ಕಿಳಿಯಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಮುಂಬೈನಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ.

ಯುಎಇಯಲ್ಲಿ ಐಪಿಎಲ್​ ನಡೆಯುವ ವಿಷಯ ಬಹಿರಂಗವಾಗುತ್ತಿದ್ದಂತೆ, ಇದು ಆರ್​ಸಿಬಿ ತಂಡಕ್ಕೆ ಅನುಕೂಲಕರ ಎಂದು ಈಗಾಗಲೆ ಕೆಲ ಕ್ರಿಕೆಟ್​ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಈಗ ಸಾಬೀತು ಪಡಿಸಿ ತೋರಿಸಲು ವಿರಾಟ್​ ಕೊಹ್ಲಿ ಸಜ್ಜಾಗುತ್ತಿರುವಂತಿದೆ. ಇದರೊಂದಿಗೆ ಆರ್​ಸಿಬಿ ಅಭಿಮಾನಿಗಳ, 'ಈ ಸಲ ಕಪ್​ ನಮ್ದೇ' ಎಂಬ ಕೂಗು ಕೂಡ ಜೋರಾಗಿ ಕೇಳಿಬರುತ್ತಿದೆ.