ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲಿ ವಿವಿಧ ಬಗೆಯ ಹೊಸಹೊಸ ರುಚಿಗಳನ್ನು ಸವಿದಿದ್ದಾರೆ. ಮುಂಬೈನ ಮನೆಯಲ್ಲಿ ಕಳೆದ ಸರಿಸುಮಾರು 4 ತಿಂಗಳಿನಿಂದ ಲಾಕ್ ಆಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಈಗ ಕರ್ನಾಟಕದ ನೆಚ್ಚಿನ ನೀರುದೋಸೆಯ ರುಚಿಯನ್ನು ಸವಿದಿದ್ದಾರೆ. ಇಂಥ ದೋಸೆಯನ್ನು ತಿನ್ನದೆ ಹಲವು ಸಮಯವೇ ಕಳೆದಿತ್ತು ಎಂದು ನೀರುದೋಸೆಯ ರುಚಿಗೆ ಫಿದಾ ಕೂಡ ಆಗಿದ್ದಾರೆ. ಹಾಗಿದ್ದರೆ ಅವರಿಗೆ ನೀರುದೋಸೆ ಎಲ್ಲಿಂದ ದೊರೆಯಿತು ಮತ್ತು ಅದನ್ನು ಮಾಡಿಕೊಟ್ಟವರು ಯಾರು ಗೊತ್ತೇ?
ವಿರಾಟ್ ಕೊಹ್ಲಿ ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಮುಂಬೈ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರು ಟೀಮ್ ಇಂಡಿಯಾ ನಾಯಕನಿಗೆ ನೀರುದೋಸೆಯನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ಈ ಬಗ್ಗೆ ಬುಧವಾರ ಟ್ವಿಟರ್ನಲ್ಲಿ ಬರೆದುಕೊಂಡಿರುವ ಕೊಹ್ಲಿ, 'ನಮ್ಮ ಮನೆಯಿಂದ 500 ಮೀಟರ್ ದೂರದಲ್ಲಿರುವ ನಮ್ಮ ನೆರೆಮನೆಯವರು ಇಂದು ಮನೆಯಲ್ಲೇ ಮಾಡಿದ ನೀರುದೋಸೆ ತಂದುಕೊಟ್ಟರು ಮತ್ತು ನಮ್ಮ ಮುಖದಲ್ಲಿ ನಗು ಮೂಡಿಸಿದರು. ಇಂಥ ರುಚಿಯಾದ ದೋಸೆಯನ್ನು ಬಹಳ ಸಮಯದಿಂದ ತಿಂದಿರಲಿಲ್ಲ' ಎಂದಿದ್ದಾರೆ.
ಇದನ್ನೂ ಓದಿ: VIDEO | ಧೋನಿ ಬರ್ತ್‌ಡೇಗೆ ಅಚ್ಚರಿ ನೀಡಲು ರಾಂಚಿಗೆ ಹೋದ ಪಾಂಡ್ಯ ಬ್ರದರ್ಸ್!
ಶ್ರೇಯಸ್ ಅಯ್ಯರ್ ಅಮ್ಮ ಮಂಗಳೂರು ಮೂಲದವರು!
ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರ ಅಮ್ಮ ರೋಹಿಣಿ ಅಯ್ಯರ್ ಮಂಗಳೂರು ಮೂಲದವರು ಅವರು ಮಾಡಿಕೊಟ್ಟ ನೀರುದೋಸೆಯನ್ನು ವಿರಾಟ್ ಕೊಹ್ಲಿ ಮನೆಗೆ ತಲುಪಿಸಲಾಗಿದೆ. ನೀರುದೋಸೆ ಮಾಡಿಕೊಟ್ಟಿದ್ದಕ್ಕಾಗಿ ಶ್ರೇಯಸ್ ಅಯ್ಯರ್ ಅಮ್ಮನಿಗೆ ದೊಡ್ಡ ಧನ್ಯವಾದಗಳು ಎಂದೂ ಕೊಹ್ಲಿ ಟ್ವೀಟಿಸಿದ್ದಾರೆ. ಜತೆಗೆ ಶ್ರೇಯಸ್ ಅಯ್ಯರ್ ಅವರ ಮನೆಗೆ ನಮ್ಮ ಮನೆಯಲ್ಲಿ ಮಾಡಿದ ಮಶ್ರೂಮ್ ಬಿರಿಯಾನಿಯನ್ನು ಕಳುಹಿಸಿಕೊಡಲಾಗಿದೆ. ನೀವೂ ನಮ್ಮ ಬಿರಿಯಾನಿಯನ್ನು ಆನಂದಿಸಿದ್ದೀರಿ ಎಂಬ ಭರವಸೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಕರಾವಳಿಯ ನೆಚ್ಚಿನ ನೀರುದೋಸೆಯನ್ನು ವಿರಾಟ್ ಕೊಹ್ಲಿ ಸವಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಮಗೂ ಮಾಡಿಕೊಡಿ ಎಂದು ಕೆಲವರು ಶ್ರೇಯಸ್ ಅಯ್ಯರ್ ಬಳಿ ಬೇಡಿಕೆ ಇಟ್ಟಿದ್ದಾರೆ. 25 ವರ್ಷದ ಶ್ರೇಯಸ್ ಅಯ್ಯರ್ ಭಾರತ ಪರ ಇದುವರೆಗೆ 18 ಏಕದಿನ, 22 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮುಂಬೈನಲ್ಲಿ ಉದ್ಯಮಿಯಾಗಿರುವ ಅವರ ತಂದೆ ಸಂತೋಷ್ ಅಯ್ಯರ್ ಕೇರಳ ಮೂಲದವರಾಗಿದ್ದರೆ, ತಾಯಿ ರೊಹಿಣಿ ಅಯ್ಯರ್ ಮಂಗಳೂರಿನ ತುಳುವರಾಗಿದ್ದಾರೆ. ಶ್ರೇಯಸ್ ಅಯ್ಯರ್ ಮುಂಬೈ ನಗರದಲ್ಲೇ ಹುಟ್ಟಿ 12ನೇ ವಯಸ್ಸಿನಿಂದಲೇ ಕೋಚ್ ಪ್ರವೀಣ್ ಆಮ್ರೆ ಅವರಿಂದ ಕ್ರಿಕೆಟ್ ತರಬೇತಿ ಆರಂಭಿಸಿದ್ದರು.