ಕ್ರೀಡೆ

VIDEO: ಕ್ಯಾಚ್ ಕೈಚೆಲ್ಲಿದರೂ ವಿರಾಟ್ ಕೊಹ್ಲಿ ರನೌಟ್ ಕಮಾಲ್..!

raghukittur

ಸಿಡ್ನಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್ ಮಾಂತ್ರಿಕರಷ್ಟೇ ಅಲ್ಲ, ಅತ್ಯುತ್ತಮ ಫೀಲ್ಡರ್ ಕೂಡ. ಕೊಹ್ಲಿ ಕೈಯಿಂದ ಚೆಂಡು ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಕ್ರಿಕೆಟ್‌ನಲ್ಲಿ ಎಂಥ ಆಟಗಾರ ಕೂಡ ಲಯ ಕಳೆದುಕೊಳ್ಳುವುದು  ಸಾಮಾನ್ಯ. ಸತತ 2ನೇ ಪಂದ್ಯದಲ್ಲೂ ಕ್ಯಾಚ್ ಕೈಚೆಲ್ಲುವ ಮೂಲಕ ಕೊಹ್ಲಿ ಫೀಲ್ಡಿಂಗ್ ಬಗ್ಗೆಯೂ ಟೀಕೆ ವ್ಯಕ್ತವಾಗುತ್ತಿದೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ 2ನೇ ಟಿ20 ಪಂದ್ಯದ ವೇಳೆ ಕವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ, ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಮ್ಯಾಥ್ಯೂ ವೇಡ್ ನೀಡಿದ ಸುಲಭ ಕ್ಯಾಚ್ ಕೈಚೆಲ್ಲಿದರು. ಆದರೆ, ವೇಡ್ ಅವರನ್ನು ಕೊಹ್ಲಿ ರನೌಟ್ ಮಾಡುವಲ್ಲಿ ಯಶ ಕಂಡರು.

ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಭಾರತದ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ವಾಷಿಂಗ್ಟನ್ ಸುಂದರ್ ಓವರ್‌ನಲ್ಲಿ ವೇಡ್ ನೀಡಿದ ಕ್ಯಾಚ್ ಅನ್ನು ಕೊಹ್ಲಿ ಕೈಚೆಲ್ಲಿದರು. ಕೊಹ್ಲಿ ಕ್ಯಾಚ್ ಬಿಟ್ಟ ತಕ್ಷಣವೇ ರನ್ ಕಸಿಯಲು ವೇಡ್ ಯತ್ನಿಸಿದರು. ಆದರೆ, ಮತ್ತೊಂದು ತುದಿಯಲ್ಲಿದ್ದ ಸ್ಮಿತ್ ಜತೆಗೆ ಉಂಟಾದ ಸಂವಹನ ಕೊರತೆಯಿಂದ ವಾಪಸ್ ಕ್ರೀಸ್‌ಗೆ ಬರುವಷ್ಟರಲ್ಲಿ ವೇಡ್ ಅವರನ್ನು ವಿಕೆಟ್ ಕೀಪರ್ ರಾಹುಲ್ ರನೌಟ್ ಮಾಡಿದರು. ಕೊಹ್ಲಿ ಮೊದಲ ಟಿ20 ಪಂದ್ಯದ ವೇಳೆಯಲ್ಲೂ ಕ್ಯಾಚ್ ಬಿಟ್ಟಿದ್ದರು.

ಸಿಡ್ನಿ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿ ವಶಪಡಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 5 ವಿಕೆಟ್‌ಗೆ 194 ರನ್‌ಗಳಿಸಿದರೆ, ಭಾರತ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 195 ರನ್ ಗಳಿಸಿ ಜಯದ ನಗೆ ಬೀರಿತು.