ಬೆಂಗಳೂರು: ವಿಶ್ವದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆರಂಭವಾಗುವುದಕ್ಕೆ ಒಂದು ವಾರ ಬಾಕಿ ಉಳಿದಿದ್ದು, ಕ್ರೀಡಾಭಿಮಾನಿಗಳು ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕೆಕೆಆರ್ ಹಾಗೂ ಆರ್ಸಿಬಿ ಮುಖಾಮುಖಿಯಾಗಲಿದೆ. ಉಭಯ ತಂಡಗಳು ನೂತನ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ವಿಜಯಲಕ್ಷ್ಮೀ ಯಾರ ಪಾಲಾಗಲಿದ್ದಾಳೆ ಎಂದು ಕಾದು ನೋಡಬೇಕಿದೆ.
ಚಾಂಪಿಯನ್ಸ್ ಟ್ರೋಫಿಯ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಏಕದಿನ ಮಾದರಿಯಿಂದ ನಿವೃತ್ತಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ತಮ್ಮ ನಿವೃತ್ತಿಯ ಕುರಿತು ವಿರಾಟ್ ಕೊಹ್ಲಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದು, ಕ್ರೀಡಾ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಸಿಸಿದೆ.
ಆರ್ಸಿಬಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ (Virat Kohli), ನಾನು ಈಗಲೇ ನಿವೃತ್ತನಾಗುತ್ತಿಲ್ಲ. ಈ ಕ್ಷಣಕ್ಕೆ ಎಲ್ಲವೂ ಸರಿಯಾಗಿದೆ. ಸದ್ಯಕ್ಕೆ ನಾನು ಯಾವುದೇ ಘೋಷಣೆ ಮಾಡುತ್ತಿಲ್ಲ. ನಾನು ಆಟವನ್ನು ಇಷ್ಟಪಡುತ್ತಿದ್ಧೇನೆ. ಆತ್ಮತೃಪ್ತಿಗಾಗಿ ಆಡುತ್ತಿದ್ದೇನೆ. ಯಾವುದೇ ಮೈಲಿಗಲ್ಲನ್ನು ಸಾಧಿಸುವ ಉದ್ಧೇಶ ನನ್ನಲ್ಲಿ ಇಲ್ಲ.
ನನ್ನೊಳಗೆ ಸ್ಫರ್ಧಾತ್ಮಕ ಪ್ರವೃತ್ತಿ ಇರುವವರೆಗೂ ನಾನು ಆಟವಾಡುತ್ತೇನೆ. ನಾನು ಶಕ್ತಿ ಮೀರಿ ಪ್ರದರ್ಶನ ನೀಡಲು ಬಯಸುತ್ತೇನೆ. 20ರ ವಯಸ್ಸಿನಲ್ಲಿ ಮಾಡಬೇಕಾದ ಕೆಲಸವನ್ನು 30ನೇ ವಯಸ್ಸಿನಲ್ಲಿ ಮಾಡಲು ಸಾಧ್ಯವಿಲ್ಲ. ಸದ್ಯ ನಾನು ವೃತ್ತಿ ಜೀವನದ ವಿಭಿನ್ನ ಹಂತದಲ್ಲಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳುವ ಮೂಲಕ ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.