ಕ್ರೀಡೆ

PHOTO/VIDEOS | ಆರ್‌ಸಿಬಿ ತಂಡದೊಂದಿಗೆ 32ನೇ ಜನ್ಮದಿನದ ಸಂಭ್ರಮ ಆಚರಿಸಿದ ವಿರಾಟ್ ಕೊಹ್ಲಿ

ಅಬುಧಾಬಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುವಾರ 32ನೇ ವರ್ಷಕ್ಕೆ ಕಾಲಿಟ್ಟರು. ಈ ಹಿನ್ನೆಲೆಯಲ್ಲಿ ಅವರು ಬುಧವಾರ ರಾತ್ರಿ ಆರ್‌ಸಿಬಿ ತಂಡದ ಆಟಗಾರರೊಂದಿಗೆ ಅಬುಧಾಬಿಯ ಹೋಟೆಲ್‌ನಲ್ಲಿ ಜನ್ಮದಿನದ ಸಂಭ್ರಮ ಆಚರಿಸಿದರು. ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕೂಡ ಜತೆಯಲ್ಲಿದ್ದರು.

ಜನ್ಮದಿನದ ಸಂಭ್ರಮ ಆಚರಣೆಯ ಖಾಸಗಿ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಕೇಕ್ ಕತ್ತರಿಸಿದರು. ಬಳಿಕ ಆರ್‌ಸಿಬಿ ತಂಡದ ಆಟಗಾರರೆಲ್ಲರೂ ಅವರ ಮುಖ, ತಲೆಯ ತುಂಬೆಲ್ಲೆ ಕೇಕ್ ಮೆತ್ತಿಸಿ ಸಂಭ್ರಮಿಸಿದರು. ಬಳಿಕ ಆರ್‌ಸಿಬಿ ತಂಡದ ಆಟಗಾರರೆಲ್ಲರೂ ನರ್ತಿಸಿದರು. ಶುಕ್ರವಾರ ಐಪಿಎಲ್‌ನಲ್ಲಿ ಎಲಿಮಿನೇಟರ್ ಪಂದ್ಯ ಆಡಲಿರುವ ವಿರಾಟ್ ಕೊಹ್ಲಿಗೆ ಆರ್‌ಸಿಬಿ ತಂಡದ ಆಟಗಾರರು ಗೆಲುವಿನ ಉಡುಗೊರೆ ನೀಡುವರೇ ಎಂಬುದನ್ನು ಕಾದುನೋಡಬೇಕಾಗಿದೆ.

ವಿರಾಟ್ ಕೊಹ್ಲಿ ಜನ್ಮದಿನದ ಸಂಭ್ರಮಾಚರಣೆಯ ಚಿತ್ರಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ವೈರಲ್ ಆಗಿವೆ. ವಿರಾಟ್ ಕೊಹ್ಲಿ ಅವರ ಹಾಲಿ-ಮಾಜಿ ಸಹ ಮತ್ತು ಎದುರಾಳಿ ಆಟಗಾರರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಜನ್ಮದಿನದ ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ.