ಕಾನ್ಪುರ: ಎರಡು-ಮೂರನೇ ದಿನದಾಟ ಕಾಡಿದ ಮಳೆಯಿಂದಾಗಿ ಸ್ತಬ್ಧಗೊಂಡು ಡ್ರಾದತ್ತ ಸಾಗುವ ಲಕ್ಷಣ ತೋರಿಸಿದ್ದ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ, ಆತಿಥೇಯ ಭಾರತ ತಂಡ ನಾಲ್ಕನೇ ದಿನದಾಟದಲ್ಲಿ ಪ್ರದರ್ಶಿಸಿದ ಆಕ್ರಮಣಕಾರಿ ಆಟದಿಂದಾಗಿ ದಿಢೀರ್ ಜೀವಂತಿಕೆ ಪಡೆದುಕೊಂಡಿದೆ. ರೋಹಿತ್ ಶರ್ಮ ಬಳಗ ಪಂದ್ಯವನ್ನು ಗೆದ್ದು, 2-0ಯಿಂದ ಸರಣಿ ವಶಪಡಿಕೊಳ್ಳುವ ಮೂಲಕ ತವರಿನ ಸತತ ಗೆಲುವಿನ ಓಟವನ್ನು 18ನೇ ಟೆಸ್ಟ್ ಸರಣಿಗೂ ವಿಸ್ತರಿಸುವತ್ತ ದೃಷ್ಟಿನೆಟ್ಟಿದೆ.
ಕೊಹ್ಲಿ 27 ಸಾವಿರ ರನ್ ಸಾಧನೆ ವಿರಾಟ್ ಕೊಹ್ಲಿ (594 ಇನಿಂಗ್ಸ್) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 27 ಸಾವಿರ ರನ್ ಪೂರೈಸಿದ ಬ್ಯಾಟರ್ ಎನಿಸಿದರು. ಜತೆಗೆ ಈ ಸಾಧನೆ ಮಾಡಿದ 4ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಬಾಂಗ್ಲಾದೇಶ ಎದುರು ವೈಯಕ್ತಿಕ 35 ರನ್‌ಗಳಿಸಿದಾಗ ಕೊಹ್ಲಿ, ದಿಗ್ಗಜ ಸಚಿನ್ ತೆಂಡುಲ್ಕರ್ (623 ಇನಿಂಗ್ಸ್) ದಾಖಲೆಯನ್ನು ಹಿಂದಿಕ್ಕಿದರು. ಕೊಹ್ಲಿ ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,012 ರನ್ ಪೇರಿಸಿ 4ನೇ ಸ್ಥಾನದಲ್ಲಿದ್ದಾರೆ. ತೆಂಡುಲ್ಕರ್ (34,357) ಅಗ್ರಸ್ಥಾನದಲ್ಲಿದ್ದು, ಕುಮಾರ್ ಸಂಗಕ್ಕರ (28,016), ರಿಕಿ ಪಾಂಟಿಂಗ್ (27,483) ಕ್ರಮವಾಗಿ 2,3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಟೆಸ್ಟ್‌ನಲ್ಲಿ ಇದುವರೆಗೆ 115 ಟೆಸ್ಟ್‌ನಲ್ಲಿ 8,870 ರನ್, 295 ಏಕದಿನದಲ್ಲಿ 13,906 ರನ್ ಹಾಗೂ 125 ಟಿ20ಯಲ್ಲಿ 4,188 ರನ್ ಪೇರಿಸಿದ್ದಾರೆ.