ಕ್ರೀಡೆ

ಶೀಘ್ರದಲ್ಲೇ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಟೀಮ್​ ಇಂಡಿಯಾದಿಂದ ದೂರ! ಫ್ಯಾನ್ಸ್​ಗಿದು ಬ್ಯಾಡ್​ ನ್ಯೂಸ್​

ನವದೆಹಲಿ: ಪ್ರಸ್ತುತ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ನಿರತವಾಗಿದೆ. ಇತ್ತ ಬಿಸಿಸಿಐ ಟೀಮ್ ಇಂಡಿಯಾಗೆ ಹೊಸ ಮುಖ್ಯ ಕೋಚ್ ಅನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದೆ. ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಬದಲಿಗೆ ಹೊಸ ಕೋಚ್ ಬರಲಿದ್ದಾರೆ. ಹೊಸ ಕೋಚ್ ಆಗಿ ಗೌತಮ್ ಗಂಭೀರ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಟಿ20 ವಿಶ್ವಕಪ್ ಬಳಿಕ ಟೀಮ್​ ಇಂಡಿಯಾ ಎರಡು ಸರಣಿಗಳನ್ನು ಆಡಲಿದೆ. ಭಾರತ ತಂಡ ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಸರಣಿ ಆಡಲಿದೆ. ವಿಶ್ವಕಪ್ ಟೂರ್ನಿಯ ಬಳಿಕ ಜಿಂಬಾಬ್ವೆ ವಿರುದ್ಧ ಐದು ಟಿ20 ಸರಣಿ ಹಾಗೂ ಶ್ರೀಲಂಕಾ ವಿರುದ್ಧ ಮೂರು ಏಕದಿನ ಸರಣಿಗಳನ್ನು ಆಡಲಿದೆ.

ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲು ಆಯ್ಕೆಗಾರರು ಸಿದ್ಧತೆ ನಡೆಸಿದ್ದಾರೆ. ಆದರೆ, ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಹಿರಿಯ ಆಟಗಾರರಿಗೆ ಮುಂಬರುವ ಸರಣಿಯಲ್ಲಿ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಐಪಿಎಲ್​ನಲ್ಲಿ ತಮ್ಮ ಸಾಮರ್ಥ್ಯ ತೋರಿದ ಹಲವು ಯುವ ಕ್ರಿಕೆಟಿಗರನ್ನು ಜಿಂಬಾಬ್ವೆ ಟಿ20 ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಸದ್ಯ ಟಿ20 ವಿಶ್ವಕಪ್ ತಂಡದಲ್ಲಿರುವ ಯುವ ಕ್ರಿಕೆಟಿಗರಲ್ಲಿ ಹರ್ಷಿತ್ ರಾಣ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಮಯಾಂಕ್ ಯಾದವ್, ಯಶ್ ದಯಾಳ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ವಿಜಯ್ ಕುಮಾರ್ ವೈಶಾಖ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ, ಟೀಮ್​ ಇಂಡಿಯಾದಲ್ಲಿ ಕಿರಿಯರಿಗೆ ಸ್ಥಾನ ನೀಡುವುದು ಸರಿಯೇ? ಟೀಮ್​ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯನ್ನು ವಿಶ್ರಾಂತಿಯ ಹೆಸರಿನಲ್ಲಿ ಸಂಪೂರ್ಣವಾಗಿ ಬದಿಗಿಡಲು ಮುಂದಾಗುತ್ತಿದ್ದಾರಾ? ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.

ಗೌತಮ್ ಗಂಭೀರ್ ಹೊಸ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ, ಅವರು ತಂಡದಲ್ಲಿ ಭಾರಿ ಬದಲಾವಣೆಗಳನ್ನು ತರಲು ಬಯಸಿದ್ದಾರೆ. ಆ ಬದಲಾವಣೆಗಳ ಭಾಗವಾಗಿ ರೋಹಿತ್ ಮತ್ತು ಕೊಹ್ಲಿಯನ್ನು ಟಿ20ಯಿಂದ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಮತ್ತು ಕೇವಲ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಸೀಮಿತಗೊಳಿಸಲಾಗುತ್ತದೆಯೇ? ಎಂದು ಕ್ರಿಕೆಟ್ ಪ್ರೇಮಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)