ಕ್ರೀಡೆ

ಕಾಂಗ್ರೆಸ್​ ಸೇರ್ಪಡೆಯಾದ ಭಜರಂಗ್​, ವಿನೇಶ್​; ಈ ಕ್ಷೇತ್ರದಿಂದ ಕಣಕ್ಕಿಳಿಯೋದು ಫಿಕ್ಸ್​

ನವದೆಹಲಿ: ಅಕ್ಟೋಬರ್​ 05ರಂದು ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದು, ಈ ಬಾರಿ ಹರಿಯಾಣದಲ್ಲಿ ಗೆದ್ದು ಅಧಿಕಾರಕ್ಕೇರಬೇಕೆಂಬ ಇರಾದೆಯಲ್ಲಿದೆ. ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಕುಸ್ತಿಪಟುಗಳಾದ ವಿನೇಶ್​ ಪೋಗಟ್​ ಹಾಗೂ ಭಜರಂಗ್​ ಪೂನಿಯಾ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ವಿನೇಶ್​ ಹಾಗೂ ಭಜರಂಗ್​ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ವಿನೇಶ್​, ಮಹಿಳೆಯರನ್ನು ಬೆಂಬಲಿಸುವ ಪಕ್ಷಕ್ಕೆ ಸೇರ್ಪಡೆಯಾಗಿರುವುದು ನನಗೆ ಖುಷಿ ನೀಡಿದೆ. ನಮ್ಮನ್ನು ರಸ್ತೆಯಲ್ಲಿ ಎಳೆದೊಯ್ಯುವಾಗ, ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗೆ ಇದ್ದವು. ಬೇರೆ ಪಕ್ಷಗಳ ನಮ್ಮ ನೋವು ಹಾಗೂ ಕಣ್ಣೀರನ್ನು ಅರ್ಥಮಾಡಿಕೊಂಡವು. ಆದರೆ, ಬಿಜೆಪಿಗೆ ಮಾತ್ರ ಇದು ಯಾಕೆ ಅರ್ಥವಾಗಲಿಲ್ಲ. ಮಹಿಳೆಯರ ಜೊತೆ ನಿಲ್ಲುವ, ಮಹಿಳೆಯರ ವಿರುದ್ಧದ ಅನ್ಯಾಯಕ್ಕೆ ಧ್ವನಿ ಎತ್ತುವ ಪಕ್ಷಕ್ಕೆ ಸೇರಲು ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಜೂಲಾನಾ ಕ್ಷೇತ್ರದಿಂದ ವಿನೇಶ್​, ಬದ್ಲಿ ಕ್ಷೇತ್ರದಿಂದ ಭಜರಂಗ್​ ಪೂನಿಯಾ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಗುರುವಾರ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಹರಿಯಾಣ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠಯಾಗಿ ಸ್ವೀಕರಿಸಿರುವ ಕಾಂಗ್ರೆಸ್​ ರಾಜ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಸರಣಿ ಸಭೆಗಳನ್ನು ನಡೆಸುತ್ತಿದೆ.