ಬೆಂಗಳೂರು: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿದ ಬ್ಯೂರೋ ಬ್ರದರ್ಸ್ ತಂಡ ಚೊಚ್ಚಲ ವಿಜಯವಾಣಿ ಪ್ರೀಮಿಯರ್ ಲೀಗ್ (ವಿಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ಯೂರೋ ಬ್ರದರ್ಸ್ ತಂಡ 6 ವಿಕೆಟ್ಗಳಿಂದ ಸರ್ಕ್ಯುಲೇಷನ್ ಚೀತಾ ತಂಡವನ್ನು ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಸರ್ಕ್ಯುಲೇಷನ್ ಚೀತಾ ತಂಡ ನಿಗದಿತ 8 ಓವರ್ಗಳಲ್ಲಿ 8 ವಿಕೆಟ್ಗೆ 55 ರನ್ ಗಳಿಸಿತು. ಪ್ರತಿಯಾಗಿ ಬ್ಯೂರೋ ಬ್ರದರ್ಸ್ ತಂಡ 6.4 ಓವರ್ಗಳಲ್ಲಿ 4 ವಿಕೆಟ್ಗೆ 56 ರನ್ಗಳಿಸಿ ಗೆಲುವಿನ ನಗೆ ಬೀರಿತು. ವಿಜೇತ ತಂಡದ ಪ್ರವೀಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರ್ಕ್ಯುಲೇಷನ್ ತಂಡದ ಲಿಂಗರಾಜು ಸರಣಿಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬ್ಯೂರೋ ಬ್ರದರ್ಸ್ ತಂಡ, ಅಡ್ಮಿನ್ ಹಾಗೂ ಜಾಹೀರಾತು ತಂಡವನ್ನು ಮಣಿಸಿದರೆ, ಸರ್ಕ್ಯುಲೇಷನ್ ತಂಡ ಮುದ್ರಣಾಲಯ ವಿಭಾಗದ ತಂಡವನ್ನು ಸೋಲಿಸಿತ್ತು. ಇದರೊಂದಿಗೆ ಕಳೆದ ಎರಡು ದಿನಗಳಿಂದ ನಡೆದ ವಿಜಯವಾಣಿ ಕ್ರಿಕೆಟ್ ಹಬ್ಬ ಯಶಸ್ವಿ ಮುಕ್ತಾಯ ಕಂಡಿತು.
ಸರ್ಕ್ಯುಲೇಷನ್ ಚೀತಾ: 8 ಓವರ್ಗಳಲ್ಲಿ 8 ವಿಕೆಟ್ಗೆ 55 (ಹರೀಶ್ ಸಿಎನ್ 12, ಯಶವಂತ್ 8, ಮಧು 8, ಪ್ರವೀಣ್ 8ಕ್ಕೆ 3, ಅಮಿತ್ 14ಕ್ಕೆ 1, ನವೀನ್ 14ಕ್ಕೆ1), ವಿಜಯವಾಣಿ ಜಿಲ್ಲಾ ತಂಡ: 6.4 ಓವರ್ಗಳಲ್ಲಿ 4 ವಿಕೆಟ್ಗೆ 56 (ರಜನಿ 18, ಅಮಿತ್ 5, ಈರಣ್ಣ 11*, ಪ್ರಶಾಂತ್ 7*, ಹರೀಶ್ 12ಕ್ಕೆ 3).
ಹಲವು ಟೂರ್ನಿಗಳನ್ನು ನೋಡಿದ್ದೇನೆ, ಭಾಗವಹಿಸಿದ್ದೇನೆ. ವಿಜಯವಾಣಿ ಸಿಬ್ಬಂದಿ ತುಂಬಾ ಅಚ್ಚುಕಟ್ಟಾಗಿ ಈ ಟೂರ್ನಿ ನಡೆಸಿಕೊಟ್ಟಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ. | ವಿಕ್ಕಿ ವರುಣ್ ನಟ
ಒಂದೇ ಸಂಸ್ಥೆ, ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದರೂ ಮುಖ ಪರಿಚಯವಿದ್ದರೂ ಪರಸ್ಪರ ಮಾತನಾಡುವ ಪ್ರಸಂಗ ತೀರಾ ಕಡಿಮೆ. ಸದಾ ಒತ್ತಡದಲ್ಲಿ ತಮ್ಮದೇ ಕಾರ್ಯದಲ್ಲಿ ಮಿಂದೇಳುವ ಅವರಿಗೆ ಕಳೆದ ಎರಡೂ ದಿನಗಳಿಂದ ಸಂಪೂರ್ಣ ರಿಲ್ಯಾಕ್ಸ್. ಇದಕ್ಕೆ ಕಾರಣವಾಗಿದ್ದು ವಿಜಯವಾಣಿ ಪ್ರೀಮಿಯರ್ ಲೀಗ್. ತಮ್ಮ ವಿಭಾಗದ ತಂಡ ತಮ್ಮದೇ ಸಂಸ್ಥೆಯ ಮತ್ತೊಂದು ತಂಡದ ಎದುರು ಆಡುವಾಗ ಪರಸ್ಪರ ಕಿರುಚುತ್ತ ಕೂಗುತ್ತ ಕ್ರಿಕೆಟ್ ಮಜಾ ಅನುಭವಿಸಿದರು. ವಿಜಯವಾಣಿಯ ಚೊಚ್ಚಲ ಟೂರ್ನಿಯಾಗಿದ್ದರಿಂದ ಎಲ್ಲರಿಗೂ ಟೂರ್ನಿ ಮೇಲೆ ಹೆಚ್ಚಿನ ಕುತೂಹಲವಿತ್ತು. ಪುರುಷ ಪ್ರಧಾನ ಕ್ರೀಡೆಯಾಗಿದ್ದರೂ ಮಹಿಳಾ ಉದ್ಯೋಗಿಗಳ ಉತ್ಸಾಹ ಮಾತ್ರ ಇಮ್ಮಡಿಯಾಗಿತ್ತು. ಪ್ರತಿ ತಂಡದಲ್ಲೂ ಒಬ್ಬ ಮಹಿಳಾ ಸಿಬ್ಬಂದಿಗೆ ಆಡುವ ಅವಕಾಶ ಕಲ್ಪಿಸಲಾಗಿತ್ತು. ಸೋಲು-ಗೆಲುವು ಲೆಕ್ಕಿಸದೆ ತಮ್ಮ ನೆಚ್ಚಿನ ತಂಡಕ್ಕೆ ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದರು. ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಉದ್ಯೋಗಿಗಳು ಕೆಲವು ಚಲನಚಿತ್ರ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು.
ಒತ್ತಡದಿಂದ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಕ್ರೀಡಾ ಚಟುವಟಿಕೆ ಅಗತ್ಯ. ಇಂಥ ಟೂರ್ನಿಗೆ ಪ್ರಾಯೋಜಕತ್ವ ವಹಿಸಿದ್ದಕ್ಕೆ ಖುಷಿ ನೀಡಿದೆ. ಮುಂದಿನ ದಿನಗಳಲ್ಲೂ ಪ್ರೋತ್ಸಾಹ ನೀಡಲು ಉತ್ಸುಕನಾಗಿದ್ದೇನೆ. | ಪ್ರಶಾಂತ್ ಕುಮಾರ್ ಸಿ ಪ್ಲಾನೆಟ್ ಸ್ಪೋರ್ಟ್ಸ್
ಪ್ರಶಸ್ತಿ ವಿಜೇತ ತಂಡಕ್ಕೆ ಟ್ರೋಫಿ ಪ್ರಾಯೋಜಕರಾದ ಪ್ಲಾ್ಯನೆಟ್ ಸ್ಪೋರ್ಟ್ಸ್ನ ಪ್ರಶಾಂತ್ ಕುಮಾರ್ ಸಿ. ಟ್ರೋಫಿ ಪ್ರದಾನ ಮಾಡಿದರೆ, ರನ್ನರ್ಅಪ್ ತಂಡಕ್ಕೆ ನಟ ವಿಕ್ಕಿ ವರುಣ್ ಪ್ರಶಸ್ತಿ ವಿತರಿಸಿದರು.