ಕ್ರೀಡೆ

ವಿಜಯ್ ಹಜಾರೆ ಟ್ರೋಫಿಯಲ್ಲಿ ಇಂದು ಕ್ವಾರ್ಟರ್‌ ಫೈನಲ್; ಕರ್ನಾಟಕಕ್ಕೆ ತಮಿಳುನಾಡು ಸವಾಲು

ಜೈಪುರ: ದೇಶೀಯ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಅಂತಿಮ ಎಂಟರ ಘಟ್ಟದ ಹಣಾಹಣಿಯಲ್ಲಿ ಮಂಗಳವಾರ ಎದುರಾಗಲಿವೆ. ಲೀಗ್ ಹಂತದಲ್ಲಿ ಬಲಿಷ್ಠ ತಮಿಳುನಾಡಿಗೆ ಹೀನಾಯವಾಗಿ ಶರಣಾಗಿದ್ದ ಕರ್ನಾಟಕ, ಕಳೆದ ತಿಂಗಳು ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಫೈನಲ್‌ನಲ್ಲೂ ಕಡೇ ಎಸೆತದಲ್ಲಿ ಸಿಕ್ಸರ್ ಬಿಟ್ಟುಕೊಟ್ಟು ಪ್ರಶಸ್ತಿ ಕೈಚೆಲ್ಲಿತ್ತು. ಕಳೆದ ಒಂದು ತಿಂಗಳ ಅಂತರದಲ್ಲಿ ತಮಿಳುನಾಡು ತಂಡಕ್ಕೆ ಎರಡೂ ಬಾರಿ ಶರಣಾಗಿರುವ ಕರ್ನಾಟಕ ತಂಡ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಲೀಗ್ ಹಂತದ ಕಡೇ ಪಂದ್ಯದಲ್ಲಿ ಸೋತ ಪರಿಣಾಮ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ತಪ್ಪಿಸಿಕೊಂಡಿದ್ದ ಕರ್ನಾಟಕ ತಂಡ, ಪ್ರಿ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ರಾಜಸ್ಥಾನ ಎದುರು 8 ವಿಕೆಟ್‌ಗಳಿಂದ ಜಯಿಸಿತ್ತು. ಅನುಭವಿ ಆರ್.ಸಮರ್ಥ್, ದೇವದತ್ ಪಡಿಕಲ್, ಕೆವಿ ಸಿದ್ದಾರ್ಥ್, ನಾಯಕ ಮನೀಷ್ ಪಾಂಡೆ, ಅಭಿನವ್ ಮನೋಹರ್, ಕೆ.ಗೌತಮ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ವೇಗಿ ಪ್ರಸಿದ್ಧ ಕೃಷ್ಣ, ವೈಶಾಕ್ ವಿಜಯ್‌ಕುಮಾರ್ ಒಳಗೊಂಡ ಬೌಲಿಂಗ್ ಪಡೆ ತಮಿಳುನಾಡು ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ. ಎನ್.ಜಗದೀಶನ್, ಬಿ. ಇಂದ್ರಜಿತ್, ನಾಯಕ ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಸ್ಫೋಟಕ ಬ್ಯಾಟರ್ ಶಾರುಖ್ ಖಾನ್ ಒಳಗೊಂಡ ತಮಿಳುನಾಡು ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಎಂ.ಸಿದ್ದಾರ್ಥ್, ಸಾಯಿ ಕಿಶೋರ್, ಸಂಜಯ್ ಯಾದವ್‌ರಂಥ ಬೌಲರ್‌ಗಳು ಕರ್ನಾಟಕಕ್ಕೆ ಅಪಾಯಕಾರಿಯಾದರೂ ಅಚ್ಚರಿಯಿಲ್ಲ.

*ಪಂದ್ಯ ಆರಂಭ: ಬೆಳಗ್ಗೆ 9.00

*ದಿನದ ಮತ್ತೊಂದು ಕ್ವಾರ್ಟರ್ ಫೈನಲ್:

ಹಿಮಾಚಲ ಪ್ರದೇಶ-ಉತ್ತರ ಪ್ರದೇಶ

ಆರಂಭ: ಬೆಳಗ್ಗೆ 9.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್