ಕ್ರೀಡೆ

ವಿಶ್ವಕಪ್​ ಬಳಿಕ ದೇಶೀಯ ಏಕದಿನ ಕ್ರಿಕೆಟ್​ ಹಬ್ಬಕ್ಕೆ ವೇದಿಕೆ ಸಜ್ಜು; ಇಂದಿನಿಂದ ವಿಜಯ್​ ಹಜಾರೆ ಟ್ರೋಫಿ

ಬೆಂಗಳೂರು: ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ಯಶಸ್ವಿ ಆಯೋಜನೆಯ ಬಳಿಕ ದೇಶೀಯ ಕ್ರಿಕೆಟ್​ನ ಪ್ರತಿಷ್ಠಿತ ಏಕದಿನ ಕ್ರಿಕೆಟ್​ ಟೂರ್ನಿ ವಿಜಯ್​ ಹಜಾರೆ ಟ್ರೋಫಿಗೆ ವೇದಿಕೆ ಸಜ್ಜಾಗಿದೆ. ವಿಶ್ವಕಪ್​ ಫೈನಲ್​ನಲ್ಲಿ ಕಂಡ ನಿರಾಸೆಯ ಬಳಿಕ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಬಲಿಷ್ಠ ತಂಡ ಕಟ್ಟುವುದು ಭಾರತದ ಗುರಿಯಾಗಿರಲಿದೆ. ಈ ನಿಟ್ಟಿನಲ್ಲಿ ಆಯ್ಕೆಗಾರರ ಗಮನಸೆಳೆಯಲು ಯುವ ಕ್ರಿಕೆಟಿಗರಿಗೆ ಈ ಟೂರ್ನಿ ಉತ್ತಮ ಅವಕಾಶವಾಗಿರಲಿದೆ.

ದೇಶದ 5 ಭಿನ್ನ ನಗರಗಳಲ್ಲಿ ಟೂರ್ನಿಯ ಗುಂಪು ಹಂತದ ಪಂದ್ಯಗಳು ಆಯೋಜನೆಗೊಂಡಿವೆ. ಬೆಂಗಳೂರಿನಲ್ಲಿ ಎ ಗುಂಪಿನ ಪಂದ್ಯಗಳು ನಡೆಯಲಿದ್ದರೆ, ಕರ್ನಾಟಕ ತಂಡವಿರುವ ಸಿ ಗುಂಪಿನ ಪಂದ್ಯಗಳು ಅಹಮದಾಬಾದ್​ನಲ್ಲಿ ನಡೆಯಲಿವೆ. ಕಳೆದ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕನಿಷ್ಠ ನಾಕೌಟ್​ ಹಂತಕ್ಕೂ ಪ್ರವೇಶಿಸದೆ ನಿರಾಸೆ ಅನುಭವಿಸಿರುವ ಕರ್ನಾಟಕ ತಂಡ ಏಕದಿನ ಕ್ರಿಕೆಟ್​ನಲ್ಲಿ ಪುಟಿದೇಳುವ ಹಂಬಲದಲ್ಲಿದೆ. ರಾಜ್ಯಕ್ಕೆ ಜಮ್ಮು-ಕಾಶ್ಮೀರ ತಂಡ ಮೊದಲ ಎದುರಾಳಿಯಾಗಿದೆ.

ಕರ್ನಾಟಕ ತಂಡ: ಮಯಾಂಕ್​ ಅಗರ್ವಾಲ್​ (ನಾಯಕ), ಆರ್​. ಸಮರ್ಥ್​ (ಉಪನಾಯಕ), ದೇವದತ್​ ಪಡಿಕಲ್​, ಮನೀಷ್​ ಪಾಂಡೆ, ಅಭಿನವ್​ ಮನೋಹರ್​, ನಿಕಿನ್​ ಜೋಸ್​, ಬಿಆರ್​ ಶರತ್​, ಕೆ. ಗೌತಮ್​, ಶುಭಾಂಗ್​ ಹೆಗ್ಡೆ, ವೈಶಾಕ್​ ವಿಜಯ್​ ಕುಮಾರ್​, ವಿದ್ವತ್​ ಕಾವೇರಪ್ಪ, ವಿ. ಕೌಶಿಕ್​, ಮನೋಜ್​ ಭಾಂಡಗೆ, ಕೆಎಲ್​ ಶ್ರೀಜಿತ್​, ಜೆ. ಸುಚಿತ್​.

ಕರ್ನಾಟಕದ ಪಂದ್ಯಗಳು

ದಿನಾಂಕ: ಎದುರಾಳಿ

ನ. 23: ಜಮ್ಮು-ಕಾಶ್ಮೀರ

ನ. 25: ಉತ್ತರಾಖಂಡ

ನ. 27: ದೆಹಲಿ

ನ. 29: ಬಿಹಾರ

ಡಿ.1: ಚಂಡೀಗಢ

ಡಿ. 3: ಹರಿಯಾಣ

ಡಿ. 5: ಮಿಜೋರಾಂ

ಆರಂಭ: ಬೆಳಗ್ಗೆ 9.00

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 38 ತಂಡಗಳನ್ನು 5 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಎ, ಬಿ, ಸಿ ಗುಂಪಿನಲ್ಲಿ ತಲಾ 8 ತಂಡಗಳಿದ್ದರೆ, ಡಿ, ಇ ಗುಂಪಿನಲ್ಲಿ ತಲಾ 7 ತಂಡಗಳಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್​ ಹಂತಕ್ಕೇರಲಿವೆ. ಈ ಪೈಕಿ ಒಟ್ಟಾರೆ ಅಂಕ/ಜಯ/ರನ್​ರೇಟ್​ ಆಧಾರದಲ್ಲಿ ಅಗ್ರ 6 ತಂಡಗಳು ನೇರವಾಗಿ ಕ್ವಾರ್ಟರ್​ಫೈನಲ್​ಗೇರಲಿದ್ದರೆ, ಉಳಿದ 4 ತಂಡಗಳು ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ಆಡಲಿವೆ. ನಾಕೌಟ್​ ಪಂದ್ಯಗಳು ಡಿಸೆಂಬರ್​ 9ರಿಂದ 16ರವರೆಗೆ ರಾಜ್​ಕೋಟ್​ನಲ್ಲಿ ನಡೆಯಲಿವೆ.

ಗುಂಪುಗಳು:

ಎ (ಬೆಂಗಳೂರು): ಸೌರಾಷ್ಟ್ರ, ಕೇರಳ, ಮುಂಬೈ, ರೈಲ್ವೇಸ್​, ತ್ರಿಪುರ, ಪುದುಚೇರಿ, ಒಡಿಶಾ, ಸಿಕ್ಕಿಂ.

ಬಿ(ಜೈಪುರ): ಮಹಾರಾಷ್ಟ್ರ, ಜಾರ್ಖಂಡ್​, ಹೈದರಾಬಾದ್​, ಚಂಡೀಗಢ, ವಿದರ್ಭ, ಸರ್ವೀಸಸ್​, ಮೇಘಾಲಯ, ಮಣಿಪುರ.

ಸಿ (ಅಹಮದಾಬಾದ್​): ಕರ್ನಾಟಕ, ಜಮ್ಮು-ಕಾಶ್ಮೀರ, ಚಂಡೀಗಢ, ಹರಿಯಾಣ, ದೆಹಲಿ, ಉತ್ತರಾಖಂಡ, ಬಿಹಾರ, ಮಿಜೋರಾಂ.

ಡಿ (ಚಂಡೀಗಢ): ಅಸ್ಸಾಂ, ಉತ್ತರ ಪ್ರದೇಶ, ಆಂಧ್ರ, ರಾಜಸ್ಥಾನ, ಗುಜರಾತ್​, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ.

ಇ (ಮುಂಬೈ): ಪಂಜಾಬ್​, ತಮಿಳುನಾಡು, ಮಧ್ಯಪ್ರದೇಶ, ಬಂಗಾಳ, ಬರೋಡ, ಗೋವಾ, ನಾಗಾಲ್ಯಾಂಡ್​.

ತಾರೆಯರು ಕಣಕ್ಕೆ

ಟೂರ್ನಿಯಲ್ಲಿ ಯುವ ಆಟಗಾರರ ಜತೆಗೆ ಕೆಲ ಅನುಭವಿ ಆಟಗಾರರೂ ಆಯ್ಕೆಗಾರರ ಗಮನಸೆಳೆದು ವೃತ್ತೀಜಿವನದ ಪುನರುತ್ಥಾನಕ್ಕೆ ಪ್ರಯತ್ನಿಸಲಿದ್ದಾರೆ. ಆಸೀಸ್​ ವಿರುದ್ಧದ ಟಿ20 ಸರಣಿಗೆ ಕಡೆಗಣಿಸಲ್ಪಟ್ಟಿರುವ ಸಂಜು ಸ್ಯಾಮ್ಸನ್​, ಕೇರಳ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ. ಕರ್ನಾಟಕದಿಂದ ವಿದರ್ಭಕ್ಕೆ ವಲಸೆ ಹೋಗಿರುವ ಅನುಭವಿ ಬ್ಯಾಟರ್​ ಕರುಣ್​ ನಾಯರ್​, ಬರೋಡ ನಾಯಕ ಕೃನಾಲ್​ ಪಾಂಡ್ಯ, ವಿಶ್ವಕಪ್​ ವೇಳೆ ಕಾಮೆಂಟರಿಯಲ್ಲಿ ಬಿಜಿಯಾಗಿದ್ದ ತಮಿಳುನಾಡಿನ ವಿಕೆಟ್​ ಕೀಪರ್-ಬ್ಯಾಟರ್​ ದಿನೇಶ್​ ಕಾರ್ತಿಕ್​, ಮುಂಬೈನ ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ, ಮಹಾರಾಷ್ಟ್ರದ ಕೇದಾರ್​ ಜಾಧವ್​ ಕಣದಲ್ಲಿರುವ ಪ್ರಮುಖರು.