ಕ್ರೀಡೆ

ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್​ ಪಠಾಣ್​

ನವದೆಹಲಿ: ಹದಿಮೂರು ವರ್ಷಗಳಿಂದ ಕೋಟ್ಯಂತರ ಭಾರತೀಯರು ಈ ಒಂದು ದಿನಕ್ಕಾಗಿ ಕಾಯುತ್ತಿದ್ದರು. 2022ರಲ್ಲಿ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಸೋಲು. ಅದಾದ ಬಳಿಕ 2023ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಹೀನಾಯ ಸೋಲಿನಿಂದ ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರಾಗಿತ್ತು. ಟೀಮ್​ ಇಂಡಿಯಾದ ನಾಯಕತ್ವ ವಹಿಸಿದ್ದ ರೋಹಿತ್​ ಶರ್ಮರಿಗಂತೂ ಈ ಸೋಲುಗಳು ದಿಕ್ಕೇ ತೋಚದಂತೆ ಮಾಡಿದ್ದವು. ಅಕ್ಷರಶಃ ರೋಹಿತ್​ ಕಣ್ಣೀರು ಹಾಕಿದ್ದರು. ಟೀಮ್​ ಇಂಡಿಯಾ ಕಂಗಾಲಾಗಿತ್ತು. ಆದರೆ, ನಿನ್ನೆಯ ಗೆಲುವು ಎಲ್ಲ ನೋವುಗಳನ್ನು ಅಳಿಸಿ ಹಾಕಿ ಖುಷಿಯ ರಸಭೋಜವನ್ನು ಉಣಬಡಿಸಿತು. ಇಡೀ ದೇಶವೇ ಸಂತೋಷದ ಸಂಭ್ರಮದಲ್ಲಿ ಮುಳುಗಿತು. ಇದರ ನಡುವೆ ಈ ಗೆಲುವಿನ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರತಿಕ್ರಿಯಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ.

ಸ್ಟಾರ್​ ಸ್ಪೋರ್ಟ್ಸ್​ ವಾಹಿನಿಯಲ್ಲಿ ಕಾಮೆಂಟರಿ ತಂಡದೊಂದಿಗೆ ಮಾತನಾಡುತ್ತಿದ್ದ ವೇಳೆ ಇರ್ಫಾನ್​ ಪಠಾಣ್​ ಇದ್ದಕ್ಕಿದ್ದಂತೆ ಭಾವುಕರಾದರು. ಕಳೆದ ಕೆಲವು ದಿನಗಳಿಂದ ವೈಯಕ್ತಿಕ ಜೀವನದಲ್ಲಿ ತೀವ್ರ ದುಃಖದಲ್ಲಿದ್ದ ಪಠಾಣ್​ಗೆ ಟೀಮ್​ ಇಂಡಿಯಾದ ಗೆಲುವು ಅಪಾರ ಸಂತಸವನ್ನು ತುಂಬಿದೆ. ತಮ್ಮ ಸಹೋದರ ಫೈಯಾಜ್​ ಅಗಲಿಕೆಯಿಂದ ಮನನೊಂದಿದ್ದ ಇರ್ಫಾನ್​ಗೆ ಈ ಗೆಲುವು ನೋವು ಮರೆಸಿದೆ.

ನಿನ್ನೆ (ಜೂನ್​ 29) ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಇದರೊಂದಿಗೆ ಭಾರತ 7 ರನ್‌ಗಳ ರೋಚಕ ಜಯ ದಾಖಲಿಸಿತು. ಈ ಪಂದ್ಯವನ್ನು ಗೆದ್ದ ನಂತರ ಇರ್ಫಾನ್ ಪಠಾಣ್ ಕಣ್ಣೀರು ಹಾಕಿದರು. ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ನನ್ನ ಧನ್ಯವಾದಗಳು. ಸೂರ್ಯಕುಮಾರ್ ಯಾದವ್, ನಿಮ್ಮ ಕ್ಯಾಚ್ ಅನ್ನು ನನ್ನ ಕೊನೆಯ ಉಸಿರು ಇರೋವರೆಗೂ ಮರೆಯುವುದಿಲ್ಲ. ಅಪಾಯಕಾರಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಕ್ಯಾಚ್ ಹಿಡಿದು ಪಂದ್ಯಕ್ಕೆ ರೋಚಕ ತಿರುವು ನೀಡಿದರು. 20ನೇ ಓವರ್‌ನಲ್ಲಿ ಆ ಬಾಲ್ ಸಿಕ್ಸರ್​ ಆಗಿದ್ದರೆ, ಭಾರತ ಸೋಲನುಭವಿಸುತ್ತಿತ್ತು. ಆದರೆ, ಆ ಒಂದು ಕ್ಯಾಚ್​ ಎಲ್ಲವನ್ನು ಬದಲಿಸಿತು. ಐ ಲವ್ ಯೂ ಟೀಮ್ ಇಂಡಿಯಾ ಎಂದು ಇರ್ಫಾನ್​ ಭಾವುಕರಾದರು.

ಪಂದ್ಯದ ವಿಚಾರಕ್ಕೆ ಬರುವುದಾದರೆ, ವೆಸ್ಟ್​ಇಂಡೀಸ್​ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡ, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ನಿಗದಿತ 20 ಓವರ್​ಗಳು ಮುಕ್ತಾಯಗೊಳ್ಳುವಾಗ 7 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ರನ್ ಮೆಷಿನ್​ ಕೊಹ್ಲಿಯ ಅಬ್ಬರದ ಅರ್ಧಶತಕ (76 ರನ್​) ಹಾಗೂ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​) ನೆರವಿನಿಂದ ಉತ್ತಮ ರನ್​ ಕಲೆಹಾಕಿತು.

ಟೀಮ್​ ಇಂಡಿಯಾ ನೀಡಿದ 177 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸೂಕ್ತ ಪ್ರತಿರೋಧ ತೋರಿತಾದರೂ ಅಂತಿಮ ಹಂತದಲ್ಲಿ ಎಡವಿತು. 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 169 ರನ್​ಗಳನ್ನು ಕಲೆಹಾಕುವ ಮೂಲಕ 7 ರನ್​ಗಳ ಅಂತರದಲ್ಲಿ ಪಂದ್ಯವನ್ನು ಕೈಚೆಲ್ಲಿತು. ಈ ಮೂಲಕ ಟ್ರೋಫಿ ಭಾರತದ ಪಾಲಾಯಿತು. (ಏಜೆನ್ಸೀಸ್​)