ಕಲ್ಕತ್ತಾ: ಟೀಮ್ ಇಂಡಿಯಾದ (Team India) ಆಟಗಾರ ವೃದ್ದಿಮಾನ್ ಸಹಾ (Wriddhiman saha) ಐಪಿಎಲ್ ಹೊರತುಪಡಿಸಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಕಣಕ್ಕಿಳಿದಿರುವ ಸಹಾ ಅವರ ಈ ನಿರ್ಧಾರ ಹಲವರಿಗೆ ಅಚ್ಚರಿಯನ್ನುಂಟು ಮಾಡಿದ್ದು, ಈ ಮೂಲಕ 17 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಲು ವೃದ್ಧಿಮಾನ್ ಸಹಾ (Wriddhiman saha) ನಿರ್ಧರಿಸಿದ್ದಾರೆ.
17 ವರ್ಷಗಳ ವೃತ್ತಿ ಜೀವನದಲ್ಲಿ ಸಾಹ 15 ವರ್ಷಗಳ ಕಾಲ ಬಂಗಾಳ ಪರವಾಗಿ ಮತ್ತು 2 ವರ್ಷಗಳ ಕಾಲ ತ್ರಿಪುರಾ ಪರ ದೇಶೀಯ ಕ್ರಿಕೆಟ್ನಲ್ಲಿ ಆಡಿದ್ದಾರೆ. ಟೀಮ್ ಇಂಡಿಯಾ ಪರ 49 ಪಂದ್ಯಗಳನ್ನಾಡಿರುವ ಸಹಾ ಮೂರು ಶತಕ ಹಾಗೂ ಆರು ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ.
ಭಾರತದ ಪರ 40 ಟೆಸ್ಟ್ ಹಾಗೂ 09 ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರುವ ಸಹಾ, ಟೆಸ್ಟ್ ಕ್ರಿಕೆಟ್ನಲ್ಲಿ 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1353 ರನ್ ಕಲೆಹಾಕಿದ್ದಾರೆ. 09 ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರುವ ಸಾಹ ಕೇವಲ 41 ರನ್ ಗಳಿಸಿದ್ದಾರೆ. 2021ರಲ್ಲಿ ಕಡೆಯದಾಗಿ ಭಾರತದ (Team India) ಪರ ಕಣಕ್ಕಿಳಿದಿದ್ದರು. ಇದೀಗ ಐಪಿಎಲ್ (IPL) ಹೊರತುಪಡಿಸಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.