ಕ್ರೀಡೆ

ಅತ್ಯಂತ ಸಾಧಾರಣ ತಂಡವೆಂದು ಟೀಮ್​ ಇಂಡಿಯಾವನ್ನು ತೆಗಳಿದ ವೆಂಕಟೇಶ್​ ಪ್ರಸಾದ್​

ಬೆಂಗಳೂರು: ಇತ್ತೀಚೆಗೆ ಟೀಮ್​ ಇಂಡಿಯಾದ ಪ್ರಮುಖ ಟೀಕಾಕಾರ ಎನಿಸಿರುವ ಮಾಜಿ ವೇಗಿ ವೆಂಕಟೇಶ್​ ಪ್ರಸಾದ್​, ಹಾರ್ದಿಕ್​ ಪಾಂಡ್ಯ ಪಡೆ ವಿಂಡೀಸ್​ ವಿರುದ್ಧ ಟಿ20 ಸರಣಿ ಸೋತ ಬಳಿಕ, "ಅತ್ಯಂತ ಸಾಧಾರಣ ತಂಡವಿದು' ಎಂದು ತೆಗಳಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್​ ಪ್ರಧಾನ ಸುತ್ತಿಗೇರಲು ವಿಲವಾಗಿದ್ದ ತಂಡದ ವಿರುದ್ಧ ಸೋತಿದ್ದೇವೆ. ಬಾಂಗ್ಲಾದೇಶ ವಿರುದ್ಧವೂ ಏಕದಿನ ಸರಣಿ ಸೋತಿದ್ದೆವು. ತಂಡದ ಆಟಗಾರರ ಕೌಶಲವನ್ನು ಸುಧಾರಿಸುವ ಮಾತುಗಳ ನಡುವೆ ತಂಡದಲ್ಲಿ ಗೆಲುವಿನ ಹಸಿವು ಕಾಣಿಸುತ್ತಿಲ್ಲ. ತಂಡವೊಂದು ಭ್ರಮೆಯಲ್ಲಿದ್ದಂತಿದೆ. ನಾಯಕನು ಯಾವ ಸುಳಿವೂ ಇಲ್ಲದಂತಿದ್ದಾನೆ. ಬೌಲರ್​ಗಳು ಬ್ಯಾಟಿಂಗ್​ ಮಾಡುತ್ತಿಲ್ಲ. ಬ್ಯಾಟರ್​ಗಳು ಬೌಲಿಂಗ್​ ಮಾಡಲಾರರು ಎಂದು ವೆಂಕಟೇಶ್​ ಪ್ರಸಾದ್​ ಕಿಡಿಕಾರಿದ್ದಾರೆ.

ಮುಂದಿನ ವರ್ಷ ವೆಸ್ಟ್​ ಇಂಡೀಸ್​-ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಸಿದ್ಧತೆ ದೃಷ್ಟಿಯಿಂದ ಮಹತ್ವದ್ದೆನಿಸಿದ ಸರಣಿಯಲ್ಲಿ ಭಾರತ ತಂಡ ಸೋಲು ಅನುಭವಿಸಿರುವ ಜತೆಗೆ ನಾಯಕ ಹಾರ್ದಿಕ್​ ಪಾಂಡ್ಯ ಈ ಸೋಲಿನ ಬಳಿಕ ಹೇಳಿರುವ ಮಾತು ಕೂಡ ಕ್ರಿಕೆಟ್​ ಪ್ರೇಮಿಗಳಿಗೆ ಬೇಸರ ತಂದಿದೆ.