ಕ್ರೀಡೆ

ಐಪಿಎಲ್​ನಲ್ಲಿ ವೇಗದ ಶತಕ ಬಾರಿಸಿದ ಬೆನ್ನಲ್ಲೇ ವೈಭವ್​ಗೆ ಜಾಕ್​ಪಾಟ್​: ಒಲಿದು ಬಂತು ಸುವರ್ಣಾವಕಾಶ! Vaibhav Suryavanshi

Vaibhav Suryavanshi : ಪ್ರಸಕ್ತ ಐಪಿಎಲ್‌ ಸೀಸನ್​ನಲ್ಲಿ ಯುವ ಕ್ರಿಕೆಟಿಗರು ಸದ್ದು ಮಾಡುತ್ತಿದ್ದಾರೆ. 14 ವರ್ಷದ ವೈಭವ್​ ಸೂರ್ಯವಂಶಿ ಮತ್ತು 17 ವರ್ಷದ ಆಯುಷ್ ಮಾತ್ರೆ ತಮ್ಮ ಅಮೋಘ ಬ್ಯಾಟಿಂಗ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ವೈಭವ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತಮ್ಮ ಅಬ್ಬರದ ಬ್ಯಾಟಿಂಗ್​ ಮೂಲಕ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಇತ್ತ ಆಯುಷ್​ ಮಾತ್ರೆ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡುತ್ತಿದ್ದಾರೆ.

ಐಪಿಎಲ್​ನಲ್ಲಿ ಶತಕ ಬಾರಿಸಿದ ಬೆನ್ನಲ್ಲೇ ಅದೃಷ್ಟ ವೈಭವ್​ ಕಡೆ ತಿರುಗಿದೆ. ಹೌದು, ವೈಭವ್‌ಗೆ ಭಾರತೀಯ ಅಂಡರ್-19 ತಂಡದಲ್ಲಿ ಆಡುವ ಸುವರ್ಣಾವಕಾಶ ಸಿಕ್ಕಿದೆ. ಈ ವರ್ಷದ ಜೂನ್‌ ತಿಂಗಳಲ್ಲಿ ಭಾರತೀಯ ಜೂನಿಯರ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಇಂಗ್ಲೆಂಡ್ ವಿರುದ್ಧ 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಪ್ರವಾಸಕ್ಕಾಗಿ ಇಂಗ್ಲೆಂಡ್‌ಗೆ ಹೋಗುವ ತಂಡದಲ್ಲಿ ಸೂರ್ಯವಂಶಿ ಮತ್ತು ಆಯುಷ್​ ಮಾತ್ರೆಗೆ ಅವಕಾಶ ಸಿಕ್ಕಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಾಷ್ಟ್ರೀಯ ತಂಡಕ್ಕಾಗಿ ಸೂರ್ಯವಂಶಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಬಿಹಾರ ಮೂಲದ ಹದಿಹರೆಯದ ಕ್ರಿಕೆಟಿಗ, ಜೂನಿಯರ್ ರಾಷ್ಟ್ರೀಯ ತಂಡಕ್ಕಾಗಿ 2 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದೀಗ ಇಂಗ್ಲೆಂಡ್​ ಪ್ರವಾಸದಲ್ಲಿ ಮತ್ತೊಂದು ಅವಕಾಶ ಪಡೆದುಕೊಂಡಿದ್ದಾರೆ. ಭಾರತದ ಅಂಡರ್-19 ಬಾಲಕರ ತಂಡ ಜೂನ್ 21 ರಂದು ಯುಕೆಗೆ ಆಗಮಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಮುಂದಿನ ವರ್ಷ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ಗೆ ಸಜ್ಜಾಗಲು ಈ ಪ್ರವಾಸವು ಭಾರತೀಯ ಅಂಡರ್-19 ತಂಡಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಸೂರ್ಯವಂಶಿ ಮತ್ತು ಮಾತ್ರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್‌ನಲ್ಲಿ ಭಾರತೀಯ ಅಂಡರ್-19 ತಂಡಕ್ಕಾಗಿ ಕೊನೆಯ ಬಾರಿಗೆ ಆಡಿದ್ದರು. ಈ ವೇಳೆಯೂ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು.

ಇತಿಹಾಸ ಬರೆದ ಸೂರ್ಯವಂಶಿ

ರಾಜಸ್ಥಾನದ ಸವಾಯಿ ಮಾನ್​​ಸಿಂಗ್ ಕ್ರೀಡಾಂಗಣದಲ್ಲಿ ಏಪ್ರಿಲ್​ 29ರಂದು ಗುಜರಾತ್ ಟೈಟಾನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಇತಿಹಾಸ ಬರೆದರು. ಕೇವಲ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 11 ಸಿಕ್ಸರ್​ಗಳ ನೆರವಿನಿಂದ ಶತಕ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿನಿಂದ ಗೆಲುವಿನ ಹಳಿಗೆ ತಂದರು. ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್​ ನೋಡಿ ವಿಶ್ವ ಕ್ರಿಕೆಟ್​ ಬೆರಗಾಗಿದೆ.

ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಮತ್ತು ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಬಾರಿಸಿದ ಭಾರತೀಯ ಮೊದಲ ಆಟಗಾರನೆಂಬ ಇತಿಹಾಸವನ್ನು ಸೂರ್ಯವಂಶಿ ನಿರ್ಮಿಸಿದ್ದಾರೆ. ಅಲ್ಲದೆ, ಐಪಿಎಲ್​ನಲ್ಲೇ ಇದು ಎರಡನೇ ಅತ್ಯಂತ ವೇಗದ ಶತಕವಾಗಿದೆ. ಇದಕ್ಕೂ ಮುನ್ನ ಕ್ರಿಸ್​ ಗೇಲ್​ ಆರ್​ಸಿಬಿ ಪರ ಆಡುವಾಗ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.

ಮತ್ತೊಂದೆಡೆ, ಮಾತ್ರೆ ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಭುತ ಇನ್ನಿಂಗ್ಸ್ ಆಡುತ್ತಿದ್ದಾರೆ. ಮುಂಬೈ ಮೂಲದ ಈ ಕ್ರಿಕೆಟಿಗ ಚೆನ್ನೈ ಫ್ರಾಂಚೈಸಿಗೆ ಬದಲಿ ಆಟಗಾರನಾಗಿ ಸೇರಿಕೊಂಡರು. ಏಪ್ರಿಲ್ 20ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಐಪಿಎಲ್ ಪಂದ್ಯದಲ್ಲಿ, 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 15 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 32 ರನ್ ಗಳಿಸಿದರು. (ಏಜೆನ್ಸೀಸ್​)