ಕ್ರೀಡೆ

ಮೂರು ಬಾರಿ ಚಾಂಪಿಯನ್ ಪಟನಾಗೆ ಶಾಕ್ ನೀಡಿದ ಹಾಲಿ ಚಾಂಪಿಯನ್: ತಲೈವಾಸ್ ಎದುರು ಯು ಮುಂಬಾಗೆ ಸುಲಭ ಜಯ

ಪುಣೆ: ರೈಡರ್ ವಿ. ಅಜಿತ್ (16 ಅಂಕ) ತೋರಿದ ಭರ್ಜರಿ ನಿರ್ವಹಣೆಯಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ಪ್ಯಾಂಥರ್ಸ್‌ ತಂಡ ಮೊದಲಾರ್ಧದ ಹಿನ್ನಡೆಯಿಂದ ಕಂಬ್ಯಾಕ್ ಮಾಡಿ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಮೂರು ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಎದುರು 29-28 ಅಂತರದಿಂದ ರೋಚಕ ಗೆಲುವು ದಾಖಲಿಸಿದೆ.

ಛತ್ರಪತಿ ಸ್ಪೋಟ್ಸ್ ಕ್ಲಾಂಪೆಕ್ಸ್‌ನಲ್ಲಿ ನಡೆಯುತ್ತಿರುವ ಪುಣೆ ಚರಣದಲ್ಲಿ ಭಾನುವಾರದ ಹಾಲಿ-ಮಾಜಿ ಚಾಂಪಿಯನ್ನರ ಕಾದಾಟದಲ್ಲಿ ಪಟನಾ ಪೈರೇಟ್ಸ್ ಮೊದಲಾರ್ಧದಲ್ಲಿ 16-8 ಅಂಕಗಳಿಂದ ಮುನ್ನಡೆ ಸಾಧಿಸಿತು. ಮೊದಲ 20 ನಿಮಿಷದಲ್ಲಿ ಜೈಪುರವನ್ನು ಆಲೌಟ್ ಮಾಡಿದ ಪಟನಾ ಮೇಲುಗೈ ಸಾಧಿಸಿತು. ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಜೈಪುರ 36ನೇ ನಿಮಿಷದಲ್ಲಿ ಪಟನಾವನ್ನು ಅಲೌಟ್ ಬಲೆಗೆ ಕೆಡವಿ 24-24 ಅಂಕಗಳ ಸಮಬಲ ಸಾಧಿಸಿತು. ಅಂತಿಮ ನಿಮಿಷದಲ್ಲಿ ಎಚ್ಚರಿಕೆಯ ಆಟವಾಡಿದ ಜೈಪುರ ಟೂರ್ನಿಯಲ್ಲಿ 2ನೇ ಗೆಲುವು ಒಲಿಸಿಕೊಂಡಿತು.

ದಿನದ ಎರಡನೇ ಪಂದ್ಯದಲ್ಲಿ ಗುಮನ್ ಸಿಂಗ್ (11) ಹಾಗೂ ಅಮಿರ್ ಮೊಹಮದ್ ಜಾರ್‌ದಾನೇಶ್ (10) ತೋರಿದ ಅದ್ಭುತ ನಿರ್ವಹಣೆಯಿಂದ ಮಾಜಿ ಚಾಂಪಿಯನ್ ಯು ಮುಂಬಾ 46-33 ರಿಂದ ತಮಿಳ್ ತಲೈವಾಸ್ ಎದುರು ಗೆದ್ದು ಬೀಗಿದೆ.