ಕ್ರೀಡೆ

ಉಸೇನ್​ ಬೋಲ್ಟ್ ಜತೆ ಪಾರ್ಟಿ ಮಾಡಿದ್ದ ಕ್ರಿಸ್ ಗೇಲ್‌ಗೂ ಕರೊನಾತಂಕ! ಐಪಿಎಲ್‌ಗೆ ಪ್ರಯಾಣ ವಿಳಂಬ?

ಕಿಂಗ್‌ಸ್ಟನ್: ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್‌ಗೆ ಕರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ಆತಂಕ ಎದುರಿಸುವಂತಾಗಿದೆ. ಕಳೆದ ಶನಿವಾರವಷ್ಟೇ ಅವರು ಜಮೈಕಾದಲ್ಲಿ ಉಸೇನ್ ಬೋಲ್ಟ್ ಅವರ 34ನೇ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿರುವುದು ಇದಕ್ಕೆ ಕಾರಣವಾಗಿದೆ.

ಮುಂಬರುವ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಬೇಕಿರುವ ಕ್ರಿಸ್ ಗೇಲ್‌ಗೆ ಈ ಬೆಳವಣಿಗೆ ಟೂರ್ನಿಯಲ್ಲಿ ಆಡಲು ಅಡ್ಡಿಯಾಗುವ ಭೀತಿ ಸೃಷ್ಟಿಸಿದೆ. ಪಾರ್ಟಿಯಲ್ಲಿ ಬೋಲ್ಟ್ ಜತೆಗೆ ಇತರ ಗಣ್ಯರೂ ಭಾಗವಹಿಸಿದ್ದರು. ಬೋಲ್ಟ್‌ಗೆ ಕರೊನಾ ಪಾಸಿಟಿವ್ ಇರುವುದು ಭಾನುವಾರವಷ್ಟೇ ದೃಢಪಟ್ಟಿದೆ. ಇದರಿಂದ ಬೋಲ್ಟ್ ಜತೆ ಪಾರ್ಟಿ ಮಾಡಿದ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿಡುವ ಸಾಧ್ಯತೆ ಇದ್ದು, ಕ್ರಿಸ್ ಗೇಲ್ ಐಪಿಎಲ್ ಟೂರ್ನಿಗಾಗಿ ಯುಎಇಗೆ ಪ್ರಯಾಣ ಬೆಳೆಸುವುದು ವಿಳಂಬವಾಗಬಹುದು ಎನ್ನಲಾಗಿದೆ.

ಬೋಲ್ಟ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಗೆಳತಿ ಕಸಿ ಬೆನ್ನೆಟ್ ಪಾರ್ಟಿಯನ್ನು ಆಯೋಜಿಸಿದ್ದರು. ಕಳೆದ ಮೇನಲ್ಲಿ ತಂದೆಯಾದ ಬಳಿಕ ಬೋಲ್ಟ್‌ಗೆ ಇದು ಮೊದಲ ಜನ್ಮದಿನವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಬೋಲ್ಟ್, ಮಗುವಿನ ಜತೆಗೆ ಕ್ಲಿಕ್ಕಿಸಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವಿನ ಆರೋಗ್ಯದ ಬಗ್ಗೆಯೂ ಆತಂಕ ಸೃಷ್ಟಿಸಿದೆ.

ಪಾರ್ಟಿಯ ವೇಳೆ ಯಾವುದೇ ಕರೊನಾ ಮಾರ್ಗಸೂಚಿಯನ್ನು ಪಾಲಿಸಿರಲಿಲ್ಲ ಮತ್ತು ಯಾರೂ ಮಾಸ್ಕ್ ಕೂಡ ಧರಿಸಿರಲಿಲ್ಲ ಎನ್ನಲಾಗಿದೆ. ಜಮೈಕಾದಲ್ಲಿ ಇದುವರೆಗೆ 1,413 ಕರೊನಾ ಪ್ರಕರಣ ದೃಢಪಟ್ಟಿದ್ದು, 16 ಮಂದಿ ಮೃತಪಟ್ಟಿದ್ದಾರೆ. ರಾಜಧಾನಿ ಕಿಂಗ್‌ಸ್ಟನ್‌ನಲ್ಲಿ ಕಳೆದ 14 ದಿನಗಳಲ್ಲಿ 410 ಹೊಸ ಪ್ರಕರಣಗಳು ಬಂದಿರುವುದು ದ್ವೀಪರಾಷ್ಟ್ರದ ಆತಂಕಕ್ಕೆ ಕಾರಣವಾಗಿದೆ.