ಕ್ರೀಡೆ

ಟಿ20 ವಿಶ್ವಕಪ್​ಗೆ ಅಮೆರಿಕ-ವೆಸ್ಟ್​ ಇಂಡೀಸ್​ ಸಜ್ಜು; ಹೇಗಿದೆ 20 ತಂಡಗಳ ಬಲಾಬಲ, ಟೂರ್ನಿ ಸ್ವರೂಪ?

ಈ ಸಲ ಐಪಿಎಲ್​ ಮುಗಿದರೂ ಟಿ20 ಕ್ರಿಕೆಟ್​ ಮನೋರಂಜನೆ ನಿಲ್ಲುತ್ತಿಲ್ಲ. 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯೊಂದಿಗೆ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್​ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಆತಿಥೇಯ ಅಮೆರಿಕ ಮತ್ತು ಕೆನಡ ನಡುವಿನ ಉದ್ಘಾಟನಾ ಪಂದ್ಯದೊಂದಿಗೆ ಭಾನುವಾರ ಬೆಳಗ್ಗೆ (ಅಮೆರಿಕದಲ್ಲಿ ಶನಿವಾರ ರಾತ್ರಿ) ಟಿ20 ವಿಶ್ವ ಸಮರಕ್ಕೆ ಚಾಲನೆ ಸಿಗಲಿದೆ. ಹಾಟ್ ಫೇವರಿಟ್​ ಭಾರತ ತಂಡ ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ನ್ಯೂಯಾರ್ಕ್​: ಕ್ರಿಕೆಟ್​ ಜಗತ್ತು ವಿಸ್ತಾರಗೊಳ್ಳುತ್ತಿದೆ. ಚುಟುಕು ಮಾದರಿಯ ಟಿ20 ಮೂಲಕ ತನ್ನ ಜನಪ್ರಿಯತೆ, ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡಿರುವ ಕ್ರಿಕೆಟ್​ ಈಗ ಹೊಸ ಹೊಸ ಪ್ರೇಕರು, ಕ್ರೀಡಾಕೂಟ ಮತ್ತು ಪ್ರದೇಶಗಳನ್ನು ತಲುಪಲಾರಂಭಿಸಿದೆ. ಇದರ ಪ್ರಮುಖ ಭಾಗವಾಗಿ ಕ್ರಿಕೆಟ್​ ಈಗ ಬೇಸ್​ಬಾಲ್​, ಬಾಸ್ಕೆಟ್​ಬಾಲ್​, ಗಾಲ್ಫ್​ ಆಟದ ವೈಭವವನ್ನು ಕಂಡಿರುವ ಅಮೆರಿಕವನ್ನು ಪ್ರವೇಶಿಸಿದೆ. 9ನೇ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಗೆ ಸಹ&ಆತಿಥೇಯ ದೇಶವಾಗುವ ಮೂಲಕ ಅಮೆರಿಕ, ಕ್ರಿಕೆಟ್​ ಜಗತ್ತಿನ ಪ್ರಮುಖ ಭಾಗವಾಗುತ್ತಿದೆ. ಜತೆಗೆ ಕೆರಿಬಿಯನ್​ ದ್ವೀಪರಾಷ್ಟ್ರಗಳು ಕ್ರಿಕೆಟ್​ ಗತವೈಭವಕ್ಕೆ ಮರಳುವ ನಿಟ್ಟಿನಲ್ಲಿ ಟೂರ್ನಿಯ ಆತಿಥ್ಯಕ್ಕೆ ಕೈಜೋಡಿಸಿವೆ. ಈ ಬಾರಿ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯೂ 16ರಿಂದ 20ಕ್ಕೆ ಏರಿಕೆಯಾಗುತ್ತಿದೆ. 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಈಗಾಗಲೆ ಟಿ20 ಆಟ ಪದಕ ಸ್ಪರ್ಧೆಯಾಗಿ ಸೇರ್ಪಡೆಯಾಗಿರುವುದರಿಂದ ಅಮೆರಿಕದಲ್ಲಿ ಕ್ರಿಕೆಟ್​ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲೂ ಇದು ಪ್ರಮುಖ ಟೂರ್ನಿ ಎನಿಸಿದೆ.

ಐಪಿಎಲ್​ನಲ್ಲಿ ಈಗಾಗಲೆ ಭರ್ಜರಿ ಸಿದ್ಧತೆ ನಡೆಸಿರುವ ಭಾರತ ತಂಡದ ಆಟಗಾರರು 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕುವ ಹಂಬಲದಲ್ಲಿದೆ. ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿರುವ ಇಂಗ್ಲೆಂಡ್​, ಇದುವರೆಗೆ ಯಾವ ತಂಡವೂ ಸತತ 2 ಬಾರಿ ಗೆಲ್ಲದ ಸಾಧನೆಯನ್ನು ಮೊದಲ ಬಾರಿ ಸಾಧಿಸುವ ತವಕದಲ್ಲಿದೆ. ಆಸ್ಟ್ರೆಲಿಯನ್ನರು ಟೆಸ್ಟ್​&ಏಕದಿನದ ಬಳಿಕ ಟಿ20ಯಲ್ಲೂ ವಿಶ್ವಕಪ್​ ಗೆದ್ದು ಏಕಕಾಲದಲ್ಲಿ ಮೂರೂ ಪ್ರಕಾರದ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ. ಪಾಕಿಸ್ತಾನ, ನ್ಯೂಜಿಲೆಂಡ್​, ದ. ಆಫ್ರಿಕಾ ಎಂದಿನಂತೆ ಈ ಸಲವೂ ಕರಿಗುದುರೆಗಳಾಗಿ ಕಣಕ್ಕಿಳಿಯಲಿವೆ. ವೆಸ್ಟ್​ ಇಂಡೀಸ್​ ತವರು ನೆಲದ ಲಾಭದೊಂದಿಗೆ ಟಿ20 ಕ್ರಿಕೆಟ್​ನಲ್ಲಿ 3ನೇ ಬಾರಿ ಅಧಿಪತ್ಯ ಸಾಧಿಸುವ ಕನಸಿನಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ, ಅ್ಘಾನಿಸ್ತಾನ ತಂಡಗಳು ಅಚ್ಚರಿಯ ನಿರ್ವಹಣೆ ತೋರುವ ಉತ್ಸಾಹದಲ್ಲಿದ್ದರೆ, ಇತರ ಅಸೋಸಿಯೇಟ್​ ದೇಶಗಳು ವಿಶ್ವಕಪ್​ನಲ್ಲಿ ತಮ್ಮದೇ ಛಾಪು ಮೂಡಿಸುವ ಹುರುಪಿನಲ್ಲಿವೆ.

ಎ ಗುಂಪು:

ಇದು ಹೈವೋಲ್ಟೇಜ್​ ಗ್ರೂಪ್​. ಭಾರತ-ಪಾಕಿಸ್ತಾನ ತಂಡಗಳೇ ಈ ಗುಂಪಿನ ಕೇಂದ್ರ ಬಿಂದು. ಆತಿಥೇಯ ಅಮೆರಿಕವೂ ಇರುವುದು ಗುಂಪಿನ ಆಕರ್ಷಣೆ ಹೆಚ್ಚಿಸಿದೆ. ಭಾರತ-ಪಾಕ್​ ತಂಡಗಳೇ ಸೂಪರ್​-8 ಹಂತಕ್ಕೇರುವ ನೆಚ್ಚಿನ ತಂಡಗಳೆನಿಸಿದ್ದರೂ, ಯಾವ ತಂಡಕ್ಕೆ ಗುಂಪಿನ ಅಗ್ರಸ್ಥಾನ ಒಲಿಯಲಿದೆ ಎಂಬುದು ಜೂನ್​ 9ರ ಮುಖಾಮುಖಿಯಲ್ಲಿ ನಿರ್ಧಾರವಾಗಲಿದೆ. ಐರ್ಲೆಂಡ್​ ಕೂಡ ನಿಕಟ ಪೈಪೋಟಿ ಒಡ್ಡಿದರೂ ಅಚ್ಚರಿ ಇಲ್ಲವೆನಿಸಿದೆ.

*ಭಾರತ

ಐಸಿಸಿ ಟಿ20 ರ‍್ಯಾಂಕ್: 1

ನಾಯಕ: ರೋಹಿತ್​ ಶರ್ಮ

ಪ್ರಮುಖ ಆಟಗಾರರು: ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ, ರಿಷಭ್​ ಪಂತ್​

ವಿಶ್ವಕಪ್​ ಸಾಧನೆ: 2007ರಲ್ಲಿ ಚಾಂಪಿಯನ್​, 2014ರಲ್ಲಿ ರನ್ನರ್​ಅಪ್​.

*ಪಾಕಿಸ್ತಾನ

ಐಸಿಸಿ ಟಿ20 ರ‍್ಯಾಂಕ್: 6

ನಾಯಕ: ಬಾಬರ್​ ಅಜಮ್​

ಪ್ರಮುಖ ಆಟಗಾರರು: ಶಹೀನ್​ ಷಾ ಅಫ್ರಿದಿ, ಮೊಹಮದ್​ ರಿಜ್ವಾನ್​, ಮೊಹಮದ್​ ಆಮೀರ್​.

ವಿಶ್ವಕಪ್​ ಸಾಧನೆ: 2009ರಲ್ಲಿ ಚಾಂಪಿಯನ್​, 2007, 2022ರಲ್ಲಿ ರನ್ನರ್​ಅಪ್​

*ಅಮೆರಿಕ

ಐಸಿಸಿ ಟಿ20 ರ‍್ಯಾಂಕ್: 18

ನಾಯಕ: ಮೊನಾಂಕ್​ ಪಟೇಲ್​

ಪ್ರಮುಖ ಆಟಗಾರರು: ಕೋರಿ ಆಂಡರ್​ಸನ್​, ಸ್ಟೀವನ್​ ಟೇಲರ್​, ಅಲಿ ಖಾನ್​.

ವಿಶ್ವಕಪ್​ ಸಾಧನೆ: ಆತಿಥೇಯ ತಂಡವಾಗಿ ಈ ಬಾರಿ ಪದಾರ್ಪಣೆ.

*ಕೆನಡ

ಐಸಿಸಿ ಟಿ20 ರ‍್ಯಾಂಕ್: 23

ನಾಯಕ: ಸಾದ್​ ಬಿನ್​ ಜಾರ್​

ಪ್ರಮುಖ ಆಟಗಾರರು: ಆರನ್​ ಜಾನ್ಸನ್​, ಕಲೀಮ್​ ಸನಾ, ದಿಲೋನ್​ ಹೇಲಿಗರ್​.

ವಿಶ್ವಕಪ್​ ಸಾಧನೆ: ಮೊದಲ ಬಾರಿ ಟಿ20 ವಿಶ್ವಕಪ್​ನಲ್ಲಿ ಕಣಕ್ಕೆ.

*ಐರ್ಲೆಂಡ್​

ಐಸಿಸಿ ಟಿ20 ರ‍್ಯಾಂಕ್: 11

ನಾಯಕ: ಪೌಲ್​ ಸ್ಟಿರ್ಲಿಂಗ್​

ಪ್ರಮುಖ ಆಟಗಾರರು: ಆಂಡ್ರ್ಯೋ ಬಲ್ಬಿರ್ನಿ, ಜೋಶ್​ ಲಿಟಲ್​, ಹ್ಯಾರಿ ಟೆಕ್ಟರ್​.

ವಿಶ್ವಕಪ್​ ಸಾಧನೆ: 2009ರ ಪದಾರ್ಪಣೆ ಆವೃತ್ತಿಯಲ್ಲೇ ಸೂಪರ್​-8 ಪ್ರವೇಶ.

ಬಿ ಗುಂಪು

ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೆಲಿಯಾ-ಇಂಗ್ಲೆಂಡ್​ ಉಪಸ್ಥಿತಿ ಗುಂಪಿನ ಮಹತ್ವ ಹೆಚ್ಚಿಸಿದೆ. ಇಂಗ್ಲೆಂಡ್​ ಹಾಲಿ ಚಾಂಪಿಯನ್​ ಆಗಿ ಅಭಿಯಾನ ಆರಂಭಿಸುತ್ತಿದ್ದರೆ, ಆಸೀಸ್​ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​, ಏಕದಿನ ವಿಶ್ವಕಪ್​ ಬಳಿಕ ಮತ್ತೊಮ್ಮೆ ಟಿ20 ವಿಶ್ವಕಪ್​ ಗೆದ್ದು ಮೂರೂ ಪ್ರಕಾರದಲ್ಲಿ ಏಕಕಾಲದಲ್ಲಿ ವಿಶ್ವ ಚಾಂಪಿಯನ್​ ಪಟ್ಟವೇರಿದ ಸಾಧನೆಯ ಹಂಬಲದಲ್ಲಿದೆ. ಗುಂಪಿನಲ್ಲಿ ಇವೇ ಎರಡು ಸೂಪರ್​&8 ಹಂತಕ್ಕೇರುವ ನೆಚ್ಚಿನ ತಂಡಗಳಾಗಿವೆ.

*ಆಸ್ಟ್ರೆಲಿಯಾ

ಐಸಿಸಿ ಟಿ20 ರ‍್ಯಾಂಕ್: 2

ನಾಯಕ: ಮಿಚೆಲ್​ ಮಾರ್ಷ್​

ಪ್ರಮುಖ ಆಟಗಾರರು: ಡೇವಿಡ್​ ವಾರ್ನರ್​, ಗ್ಲೆನ್​ ಮ್ಯಾಕ್ಸ್​ವೆಲ್​, ಮಿಚೆಲ್​ ಸ್ಟಾರ್ಕ್​.

ವಿಶ್ವಕಪ್​ ಸಾಧನೆ: 2021ರಲ್ಲಿ ಚಾಂಪಿಯನ್​, 2010ರಲ್ಲಿ ರನ್ನರ್​ಅಪ್​.

*ಇಂಗ್ಲೆಂಡ್​

ಐಸಿಸಿ ಟಿ20 ರ‍್ಯಾಂಕ್: 3

ನಾಯಕ: ಜೋಸ್​ ಬಟ್ಲರ್​

ಪ್ರಮುಖ ಆಟಗಾರರು: ಜಾನಿ ಬೇರ್​ಸ್ಟೋ, ಜೋಫ್ರಾ ಆರ್ಚರ್​, ಸ್ಯಾಮ್​ ಕರನ್​.

ವಿಶ್ವಕಪ್​ ಸಾಧನೆ: 2010, 2022ರಲ್ಲಿ ಚಾಂಪಿಯನ್​, 2016ರಲ್ಲಿ ರನ್ನರ್​ಅಪ್​.

*ಸ್ಕಾಟ್ಲೆಂಡ್​

ಐಸಿಸಿ ಟಿ20 ರ‍್ಯಾಂಕ್: 14

ನಾಯಕ: ರಿಚಿ ಬೆರಿಂಗ್​ಟನ್​

ಪ್ರಮುಖ ಆಟಗಾರರು: ಮ್ಯಾಥ್ಯೂ ಕ್ರಾಸ್​, ಮೈಕೆಲ್​ ಜೋನ್ಸ್​, ಬ್ರಾಡ್​ ವೀಲ್​.

ವಿಶ್ವಕಪ್​ ಸಾಧನೆ: ಒಟ್ಟಾರೆ 6ನೇ, ಸತತತ 4ನೇ ಬಾರಿ ಕಣಕ್ಕೆ.

*ನಮೀಬಿಯಾ

ಐಸಿಸಿ ಟಿ20 ರ‍್ಯಾಂಕ್: 13

ನಾಯಕ: ಗೆರಾರ್ಡ್​ ಎರಾಸ್ಮಸ್​

ಪ್ರಮುಖ ಆಟಗಾರರು: ಜೆಜೆ ಸ್ಮಿತ್​, ನಿಕೋಲಸ್​ ಡೆವಿನ್​, ಬೆನ್​ ಶಿಕೊಂಗೊ.

ವಿಶ್ವಕಪ್​ ಸಾಧನೆ: ಸತತ 3ನೇ ಬಾರಿ ಕಣಕ್ಕೆ, 2021ರಲ್ಲಿ ಸೂಪರ್​&12 ಎಂಟ್ರಿ.

*ಓಮನ್​

ಐಸಿಸಿ ಟಿ20 ರ‍್ಯಾಂಕ್: 19

ನಾಯಕ: ಅಖಿಬ್​ ಇಲ್ಯಾಸ್​

ಪ್ರಮುಖ ಆಟಗಾರರು: ಜೀಶಾನ್​ ಮಕ್ಸೂದ್​, ಬಿಲಾಲ್​ ಖಾನ್​, ಕಶ್ಯಪ್​ ಪ್ರಜಾಪತಿ.

ವಿಶ್ವಕಪ್​ ಸಾಧನೆ: 2016, 2021ರ ಆವೃತ್ತಿ ಬಳಿಕ ಮತ್ತೆ ಅರ್ಹತೆ.

ಸಿ ಗುಂಪು

ಆತಿಥೇಯ ವೆಸ್ಟ್​ ಇಂಡೀಸ್​ ಮತ್ತು ನ್ಯೂಜಿಲೆಂಡ್​ ಗುಂಪಿನ ಪ್ರಮುಖ ಎರಡು ತಂಡಗಳಾಗಿವೆ. ಆದರೆ ಅಫ್ಘಾನಿಸ್ತಾನ ತಂಡ ಇತ್ತೀಚೆಗಿನ ವರ್ಷಗಳಲ್ಲಿ ಟಿ20 ಕ್ರಿಕೆಟ್​ನಲ್ಲಿ ಬಲಿಷ್ಠ ನಿರ್ವಹಣೆಗಳನ್ನು ತೋರಿಸುತ್ತ ಬಂದಿರುವ ಕಾರಣ ಈ ಗುಂಪು ಕುತೂಹಲಕಾರಿ ಎನಿಸಿದೆ. ವಿಂಡೀಸ್​ಗೆ ತವರು ನೆಲದ ಲಾಭವಿದ್ದು, 3 ಬಾರಿ ಟಿ20 ವಿಶ್ವಕಪ್​ ಗೆದ್ದ ಮೊದಲ ತಂಡವೆನಿಸುವ ಹಂಬಲದಲ್ಲಿದೆ. ಇತ್ತೀಚೆಗಿನ ಐಸಿಸಿ ಟೂರ್ನಿಗಳಲ್ಲಿ ಬಲಿಷ್ಠ ನಿರ್ವಹಣೆ ತೋರುತ್ತ ಬಂದಿರುವ ಕಿವೀಸ್​ ಕೂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

*ವೆಸ್ಟ್​ ಇಂಡೀಸ್​

ಐಸಿಸಿ ಟಿ20 ರ‍್ಯಾಂಕ್: 4

ನಾಯಕ: ರೋವ್ಮನ್​ ಪೊವೆಲ್​

ಪ್ರಮುಖ ಆಟಗಾರರು: ನಿಕೋಲಸ್​ ಪೂರನ್​, ಆಂಡ್ರೆ ರಸೆಲ್​, ಜಾನ್ಸನ್​ ಚಾರ್ಲ್ಸ್​

ವಿಶ್ವಕಪ್​ ಸಾಧನೆ: 2012, 2016ರಲ್ಲಿ ಚಾಂಪಿಯನ್​, 2 ಬಾರಿ ಸೆಮೀಸ್​ನಲ್ಲಿ ಔಟ್​.

*ನ್ಯೂಜಿಲೆಂಡ್​

ಐಸಿಸಿ ಟಿ20 ರ‍್ಯಾಂಕ್: 5

ನಾಯಕ: ಕೇನ್​ ವಿಲಿಯಮ್ಸನ್​

ಪ್ರಮುಖ ಆಟಗಾರರು: ಟ್ರೆಂಟ್​ ಬೌಲ್ಟ್​, ಡೆವೊನ್​ ಕಾನ್​ವೇ, ಡೆರಿಲ್​ ಮಿಚೆಲ್​.

ವಿಶ್ವಕಪ್​ ಸಾಧನೆ: 2021ರಲ್ಲಿ ರನ್ನರ್​ಅಪ್​, 3 ಬಾರಿ ಸೆಮೀಸ್​ನಲ್ಲಿ ಔಟ್​.

*ಅಫ್ಘಾನಿಸ್ತಾನ

ಐಸಿಸಿ ಟಿ20 ರ‍್ಯಾಂಕ್: 10

ನಾಯಕ: ರಶೀದ್​ ಖಾನ್​

ಪ್ರಮುಖ ಆಟಗಾರರು: ರಹಮಾನುಲ್ಲಾ ಗುರ್ಬಜ್​, ಮೊಹಮದ್​ ನಬಿ, ಅಜ್ಮತ್​ಉಲ್ಲಾ ಒಮರ್ಜಾಯಿ.

ವಿಶ್ವಕಪ್​ ಸಾಧನೆ: 2010ರ ನಂತರ ಪ್ರತಿ ಆವೃತ್ತಿಯಲ್ಲಿ ಕಣಕ್ಕೆ, ಕಳೆದ 3 ಬಾರಿ 2ನೇ ಸುತ್ತಿಗೆ.

*ಪಪುವಾ ನ್ಯೂಗಿನಿ

ಐಸಿಸಿ ಟಿ20 ರ‍್ಯಾಂಕ್: 20

ನಾಯಕ: ಅಸ್ಸದೊಲ್ಲಾ ವಾಲಾ

ಪ್ರಮುಖ ಆಟಗಾರರು: ಚಾರ್ಲ್ಸ್​ ಅಮಿನಿ, ಲೆಗ ಸಿಯಾಕಾ, ಅಲೀ ನಾವೊ.

ವಿಶ್ವಕಪ್​ ಸಾಧನೆ: 2021ರ ಬಳಿಕ 2ನೇ ಬಾರಿ ಸ್ಪರ್ಧೆ.

*ಉಗಾಂಡ

ಐಸಿಸಿ ಟಿ20 ರ‍್ಯಾಂಕ್: 22

ನಾಯಕ: ಬ್ರಿಯಾನ್​ ಮಸಾಬ

ಪ್ರಮುಖ ಆಟಗಾರರು: ರಿಯಾಜತ್​ ಅಲಿ ಷಾ, ಫ್ರಾಂಕ್​ ಎನ್ಸುಬುಗ, ಅಲ್ಬೇಶ್​ ರಾಜಮಣಿ.

ವಿಶ್ವಕಪ್​ ಸಾಧನೆ: ಆಫ್ರಿಕಾ ಖಂಡದಿಂದ ವಿಶ್ವಕಪ್​ಗೆ ಮೊದಲ ಬಾರಿ ಅರ್ಹತೆ.

ಡಿ ಗುಂಪು

ಇದು ಟೂರ್ನಿಯ ಗ್ರೂಪ್​ ಆಫ್​ ಡೆತ್​ ಎನ್ನಬಹುದು. ಇಲ್ಲಿ ಸೂಪರ್​&8 ಹಂತಕ್ಕೇರಲು ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಬಹುತೇಕ ತ್ರಿಕೋನ ಸ್ಪರ್ಧೆ ಇದೆ. ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಇತ್ತೀಚೆಗಿನ ವೈರತ್ವದಿಂದಲೂ ಈ ಗುಂಪಿನ ಸ್ಪರ್ಧೆ ಬಿಸಿ ಏರಿಸಲಿದೆ. ಟಿ20 ವಿಶ್ವಕಪ್​ನಲ್ಲಿ ಅಷ್ಟೇನೂ ಉತ್ತಮ ದಾಖಲೆ ಹೊಂದಿರದ ದ. ಆಫ್ರಿಕಾ ಐಸಿಸಿ ಟೂರ್ನಿಗಳ ಚೋಕರ್ಸ್​ ಪಟ್ಟವನ್ನು ಈ ಸಲವಾದರೂ ಕಳಚುವ ತವಕದಲ್ಲಿದೆ. 2022ರಲ್ಲಿ ಸೂಪರ್​-12 ಹಂತಕ್ಕೇರಿದ್ದ ನೆದರ್ಲೆಂಡ್​ ಕೂಡ ನಿಕಟ ಸ್ಪರ್ಧೆಯೊಡ್ಡುವ ನಿರೀೆ ಇದೆ.

*ದಕ್ಷಿಣ ಆಫ್ರಿಕಾ

ಐಸಿಸಿ ಟಿ20 ರ‍್ಯಾಂಕ್: 7

ನಾಯಕ: ಏಡನ್​ ಮಾರ್ಕ್ರಮ್​

ಪ್ರಮುಖ ಆಟಗಾರರು: ಕ್ವಿಂಟನ್​ ಡಿಕಾಕ್​, ಹೆನ್ರಿಕ್​ ಕ್ಲಾಸೆನ್​, ಗೆರಾಲ್ಡ್​ ಕೋಟ್​ಜೀ.

ವಿಶ್ವಕಪ್​ ಸಾಧನೆ: 2009, 2014ರಲ್ಲಿ ಸೆಮಿಫೈನಲ್​ ಪ್ರವೇಶ.

*ಶ್ರೀಲಂಕಾ

ಐಸಿಸಿ ಟಿ20 ರ‍್ಯಾಂಕ್: 8

ನಾಯಕ: ವಾನಿಂದು ಹಸರಂಗ

ಪ್ರಮುಖ ಆಟಗಾರರು: ಚರಿತ್​ ಅಸಲಂಕಾ, ಮಥೀಶ ಪಥಿರಣ, ಪಥುಮ್​ ನಿಸ್ಸಂಕ.

ವಿಶ್ವಕಪ್​ ಸಾಧನೆ: 2014ರಲ್ಲಿ ಚಾಂಪಿಯನ್​, 2009, 2012ರಲ್ಲಿ ರನ್ನರ್​ಅಪ್​.

*ಬಾಂಗ್ಲಾದೇಶ

ಐಸಿಸಿ ಟಿ20 ರ‍್ಯಾಂಕ್: 9

ನಾಯಕ: ನಜ್ಮುಲ್​ ಹೊಸೈನ್​ ಶಾಂಟೊ

ಪ್ರಮುಖ ಆಟಗಾರರು: ಶಕೀಬ್​ ಅಲ್​ ಹಸನ್​, ಮುಸ್ತಾಫಿಜುರ್​ ರೆಹಮಾನ್​, ಲಿಟನ್​ ದಾಸ್​.

ವಿಶ್ವಕಪ್​ ಸಾಧನೆ: ಒಮ್ಮೆಯೂ ನಾಕೌಟ್​ ಹಂತಕ್ಕೇರಿಲ್ಲ.

*ನೇಪಾಳ

ಐಸಿಸಿ ಟಿ20 ರ‍್ಯಾಂಕ್: 17

ನಾಯಕ: ರೋಹಿತ್​ ಪೌಡೆಲ್​

ಪ್ರಮುಖ ಆಟಗಾರರು: ದೀಪೇಂದ್ರ ಸಿಂಗ್​, ಕುಶಾಲ್​ ಬುರ್ಟೆಲ್​, ಲಲಿತ್​ ರಾಜಬಂಶಿ.

ವಿಶ್ವಕಪ್​ ಸಾಧನೆ: 2014ರ ಬಳಿಕ 2ನೇ ಬಾರಿ ಸ್ಪರ್ಧೆ.

*ನೆದರ್ಲೆಂಡ್​

ಐಸಿಸಿ ಟಿ20 ರ‍್ಯಾಂಕ್: 15

ನಾಯಕ: ಸ್ಕಾಟ್​ ಎಡ್ವರ್ಡ್ಸ್​

ಪ್ರಮುಖ ಆಟಗಾರರು: ಲೋಗನ್​ ವಾನ್​ ಬೀಕ್​, ಬಡ್​ ಡಿ ಲೀಡೆ, ಪೌಲ್​ ವಾನ್​ ಮೀಕೆರೆನ್​

ವಿಶ್ವಕಪ್​ ಸಾಧನೆ: 2014, 2022ರಲ್ಲಿ 2ನೇ ಸುತ್ತಿಗೆ ಪ್ರವೇಶ.

3 ದೇಶಗಳ ಪದಾರ್ಪಣೆ

ಈ ಬಾರಿ ಟಿ20 ವಿಶ್ವಕಪ್​ಗೆ 3 ದೇಶಗಳು ಪದಾರ್ಪಣೆ ಮಾಡುತ್ತಿವೆ. ಅವುಗಳೆಂದರೆ ಆತಿಥೇಯ ಅಮೆರಿಕ, ಕೆನಡ ಮತ್ತು ಉಗಾಂಡ. ಕೆನಡ ಈ ಹಿಂದೆ ಏಕದಿನ ವಿಶ್ವಕಪ್​ನಲ್ಲಿ ಆಡಿದ್ದರೂ, ಟಿ20 ವಿಶ್ವಕಪ್​ಗೆ ಇದು ಮೊದಲ ಎಂಟ್ರಿಯಾಗಿದೆ. ಅಮೆರಿಕ ಯಾವುದೇ ಅರ್ಹತಾ ಸುತ್ತಿನಲ್ಲಿ ಆಡದೆ ಆತಿಥೇಯ ದೇಶವಾಗಿರುವುದರಿಂದ ನೇರಪ್ರವೇಶ ಪಡೆದಿದೆ. ಉಗಾಂಡ ಆಫ್ರಿಕಾ ಖಂಡದಿಂದ ಜಿಂಬಾಬ್ವೆ, ಕೀನ್ಯಾ ತಂಡಗಳನ್ನು ಹಿಂದಿಕ್ಕಿ ಅರ್ಹತೆ ಸಂಪಾದಿಸಿದೆ.

ಚಾಂಪಿಯನ್ಸ್​

2007: ಭಾರತ

2009: ಪಾಕಿಸ್ತಾನ

2010: ಇಂಗ್ಲೆಂಡ್​

2012: ವೆಸ್ಟ್​ ಇಂಡೀಸ್​

2014: ಶ್ರೀಲಂಕಾ

2016: ವೆಸ್ಟ್​ ಇಂಡೀಸ್​

2021: ಆಸ್ಟ್ರೆಲಿಯಾ

2022: ಇಂಗ್ಲೆಂಡ್​

ಕಣದಲ್ಲಿ 20 ತಂಡಗಳು

ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ವಾಧಿಕ 20 ತಂಡಗಳು ಆಡಲಿವೆ. ಮೊದಲ 4 ಆವೃತ್ತಿಗಳಲ್ಲಿ ತಲಾ 12 ತಂಡಗಳಿದ್ದರೆ, ನಂತರದ 4 ಆವೃತ್ತಿಗಳಲ್ಲಿ ತಂಡಗಳ ಸಂಖ್ಯೆ 16ಕ್ಕೆ ಏರಿತ್ತು. ಆದರೆ 16 ತಂಡಗಳ ಟೂರ್ನಿಯಲ್ಲಿ ಪ್ರಮುಖ 8 ತಂಡಗಳು 2ನೇ ಸುತ್ತಿನಿಂದ ಅಭಿಯಾನ ಆರಂಭಿಸುತ್ತಿದ್ದವು. ಆದರೆ ಈ ಬಾರಿ ಎಲ್ಲ 20 ತಂಡಗಳು ಆರಂಭಿಕ ಸುತ್ತಿನಿಂದಲೇ ಕಣಕ್ಕಿಳಿಯಲಿವೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 20 ತಂಡಗಳನ್ನು ಲೀಗ್​ ಹಂತದಲ್ಲಿ ತಲಾ 5ರಂತೆ 4 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು 2ನೇ ಸುತ್ತು ಅಂದರೆ ಸೂಪರ್​&8 ಹಂತಕ್ಕೇರಲಿವೆ. ಇದರಲ್ಲೂ ತಲಾ 4ರಂತೆ 2 ಗುಂಪುಗಳು ಇರಲಿವೆ. ಆಯಾ ಗುಂಪಿನೊಳಗೆ ಎಲ್ಲ ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಜೂನ್​ 29ರಂದು ಬಾರ್ಬಡೋಸ್​ನಲ್ಲಿ ಫೈನಲ್​ ಪಂದ್ಯದಲ್ಲಿ 9ನೇ ಆವೃತ್ತಿಯ ಚಾಂಪಿಯನ್​ ತಂಡದ ನಿರ್ಧಾರವಾಗಲಿದೆ.

ಸೂಪರ್​-8 ಗುಂಪು ವಿಂಗಡಣೆ

ಟೂರ್ನಿಯ ಲೀಗ್​ ಹಂತದಲ್ಲಿ ಯಾವುದೇ ಆಘಾತಕಾರಿ ಲಿತಾಂಶಗಳು ಬಾರದೆ ಪ್ರಮುಖ 8 ತಂಡಗಳೇ ಸೂಪರ್​&8 ಹಂತಕ್ಕೇರಿದರೆ, ಭಾರತ (ಎ1), ಆಸ್ಟ್ರೆಲಿಯಾ (ಬಿ2), ನ್ಯೂಜಿಲೆಂಡ್​ (ಸಿ1), ಶ್ರೀಲಂಕಾ (ಡಿ2) ಮೊದಲ ಗುಂಪಿನಲ್ಲಿ ಸ್ಥಾನ ಪಡೆಯಲಿವೆ. ಪಾಕಿಸ್ತಾನ (ಎ2), ಇಂಗ್ಲೆಂಡ್​ (ಬಿ1), ವೆಸ್ಟ್​ ಇಂಡೀಸ್​ (ಸಿ2), ದ. ಆಫ್ರಿಕಾ (ಡಿ1) ತಂಡಗಳು ಇನ್ನೊಂದು ಗುಂಪಿನಲ್ಲಿರಲಿವೆ. ಐಸಿಸಿ ಈಗಾಗಲೆ ಪ್ರತಿ ಗುಂಪಿನಲ್ಲಿ 2 ತಂಡಗಳಿಗೆ ಶ್ರೇಯಾಂಕ ನೀಡಿದ್ದು, ಇದರನ್ವಯ ಆಯಾ ಗುಂಪಿನ ಅಂಕಪಟ್ಟಿಯಲ್ಲಿ ತಂಡಗಳು ಯಾವ ಸ್ಥಾನ ಪಡೆದರೂ ಐಸಿಸಿ ಈಗಾಗಲೆ ನೀಡಿರುವ ಶ್ರೇಯಾಂಕದ ಅನ್ವಯ ಸೂಪರ್​&8 ಗುಂಪಿನಲ್ಲಿ ವಿಂಗಡನೆಯಾಗಲಿವೆ. ಅಂದರೆ ಎ ಗುಂಪಿನಲ್ಲಿ ಪಾಕಿಸ್ತಾನದ ಬದಲು ಅಮೆರಿಕ ಸೂಪರ್​-8ಗೆ ಅರ್ಹತೆ ಪಡೆದರೆ ಎ2 ತಂಡ ಆಗಿರಲಿದೆ. ಅಮೆರಿಕ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೂ ಎ2 ತಂಡವೇ ಆಗಿರಲಿದೆ. ಭಾರತ ತನ್ನ ಗುಂಪಿನಲ್ಲಿ 2ನೇ ಸ್ಥಾನ ಪಡೆದರೂ ಎ1 ತಂಡವೇ ಆಗಿರಲಿದೆ. ಇದಲ್ಲದೆ ಭಾರತ ತಂಡ ಸೂಪರ್​-8 ಅಂಕಪಟ್ಟಿಯಲ್ಲಿ ಯಾವುದೇ ಸ್ಥಾನ ಪಡೆದು ಸೆಮಿಫೈನಲ್​ಗೇರಿದರೂ, ಜೂನ್​ 27ರಂದು 2ನೇ ಸೆಮೀಸ್​ನಲ್ಲೇ ಆಡಲಿದೆ. ಭಾರತದ ಪ್ರೇಕ್ಷಕರ ಅನುಕೂಲಕ್ಕಾಗಿ ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳನ್ನು ಐಸಿಸಿ ರಾತ್ರಿ 8 ಗಂಟೆಗೆ ನಿಗದಿಪಡಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಸೂಪರ್​-8 ಗುಂಪುಗಳು

ಗುಂಪು-1: ಎ1, ಬಿ2, ಸಿ1, ಡಿ2.

ಗುಂಪು-2: ಎ2, ಬಿ1, ಸಿ2, ಡಿ1.

9 ತಾಣಗಳಲ್ಲಿ ಪಂದ್ಯಗಳು

ಅಮೆರಿಕದ 3 ಮತ್ತು ವೆಸ್ಟ್​ ಇಂಡೀಸ್​ನ 6 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಈ ಪೈಕಿ 16 ಪಂದ್ಯಗಳು ಅಮೆರಿಕ ಮತ್ತು 39 ಪಂದ್ಯಗಳು ಕೆರಿಬಿಯನ್​ ದ್ವೀಪಸಮೂಹದ 6 ದೇಶಗಳಲ್ಲಿ ನಡೆಯಲಿವೆ. ಸೂಪರ್​&8 ಹಂತದ ಎಲ್ಲ 12 ಪಂದ್ಯಗಳು ಮತ್ತು ನಾಕೌಟ್​ ಹಂತದ 3 ಪಂದ್ಯಗಳು ವಿಂಡೀಸ್​ನಲ್ಲೇ ನಡೆಯಲಿವೆ.

ಸಮಯ ವ್ಯತ್ಯಾಸ

ಈ ಟಿ20 ವಿಶ್ವಕಪ್​ನಲ್ಲಿ ಪಂದ್ಯಗಳು ನಡೆಯುವ ಸಮಯದಲ್ಲಿ ಏಕರೂಪತೆ ಇಲ್ಲದೆ, ವ್ಯತ್ಯಾಸಗಳು ಹೆಚ್ಚಿವೆ. ಟೀಮ್​ ಇಂಡಿಯಾ ಆಡುವ ಪಂದ್ಯಗಳನ್ನು ಭಾರತದ ಕ್ರಿಕೆಟ್​ ಪ್ರೇಮಿಗಳಿಗೆ ಅನುಕೂಲಕರ ಎನಿಸುವ ಸಮಯದಲ್ಲಿ ನಿಗದಿಪಡಿಸಲಾಗಿದೆ. ಅಲ್ಲದೆ ಟೂರ್ನಿಯ ಫೈನಲ್​ ಸಹಿತ ಪ್ರಮುಖ ಪಂದ್ಯಗಳನ್ನು ಉಪಖಂಡದ ವೀಕ್ಷಕರಿಗೆ ಅನುಕೂಲಕವೆನಿಸುವ ಸಮಯದಲ್ಲೇ ನಡೆಸಲಾಗುತ್ತಿದೆ. ಭಾರತದಲ್ಲಿ ರಾತ್ರಿ 8 ಗಂಟೆಗೆ ನೇರಪ್ರಸಾರ ಕಾಣುವ ಪಂದ್ಯ ನ್ಯೂಯಾರ್ಕ್​ನಲ್ಲಿ ಬೆಳಗ್ಗೆ 10.30ರಿಂದಲೇ ಶುರುವಾಗಲಿದೆ. ಇನ್ನು ಅಮೆರಿಕದಲ್ಲಿ ರಾತ್ರಿ 7.30ಕ್ಕೆ ಶುರುವಾಗುವ ಪಂದ್ಯ ಭಾರತದಲ್ಲಿ ಬೆಳಗ್ಗೆ 6 ಗಂಟೆಯಿಂದ ನೇರಪ್ರಸಾರ ಕಾಣಲಿದೆ. ಭಾರತ-ಅಮೆರಿಕ ನಡುವೆ 9 ಗಂಟೆ 30 ನಿಮಿಷಗಳ ವ್ಯತ್ಯಾಸವಿರುವುದು ಇದಕ್ಕೆ ಕಾರಣ.

ಟೈ ಆದರೆ ಸೂಪರ್​ ಓವರ್​

ಟೂರ್ನಿಯ ಯಾವುದೇ ಪಂದ್ಯ ಟೈ ಆದರೂ ಸೂಪರ್​ ಓವರ್​ ಇರಲಿದೆ. ಸೂಪರ್​ ಓವರ್​ ಟೈ ಆದರೂ ನಿಖರ ಫಲಿತಾಂಶ ಬರುವವರೆಗೆ ಸೂಪರ್​ ಓವರ್​ ಪುನರಾವರ್ತನೆ ಆಗಲಿದೆ.

ಫೈನಲ್​ಗೆ ಮೀಸಲು ದಿನ

ಮಳೆ ಕಾಡಿದರೆ, ಜೂನ್​ 29ರಂದು ನಿಗದಿಯಾಗಿರುವ ಫೈನಲ್​ ಪಂದ್ಯಕ್ಕೆ ಮರುದಿನ ಅಂದರೆ ಜೂನ್​ 30 ಮೀಸಲು ದಿನ ಆಗಿರಲಿದೆ. ಸೆಮಿಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಆದರೆ ಫಲಿತಾಂಶ ನಿರ್ಧಾರಕ್ಕಾಗಿ ಜೂನ್​ 26ರ ಮೊದಲ ಸೆಮೀಸ್​ಗೆ ಹೆಚ್ಚುವರಿ 60 ನಿಮಿಷ ಮತ್ತು ಜೂನ್​ 27ರ 2ನೇ ಸೆಮೀಸ್​ಗೆ ಹೆಚ್ಚುವರಿ 190 ನಿಮಿಷ ಸಮಯ ನಿಗದಿಪಡಿಸಲಾಗಿದೆ. ನಾಕೌಟ್​ ಪಂದ್ಯಗಳಿಗೆ ಮಳೆ ಕಾಡಿದರೆ, ಫಲಿತಾಂಶ ನಿರ್ಧಾರಕ್ಕೆ ಕನಿಷ್ಠ 10 ಓವರ್​ಗಳ ಪಂದ್ಯ ಅಗತ್ಯ.

9 ಕ್ರೀಡಾಂಗಣಗಳು

*ನಾಸೌ ಕೌಂಟಿ ಸ್ಟೇಡಿಯಂ, ನ್ಯೂಯಾರ್ಕ್​

*ಗ್ರಾಂಡ್​ ಪೆರೀ ಸ್ಟೇಡಿಯಂ, ಡಲ್ಲಾಸ್​

*ಬ್ರೋವರ್ಡ್​ ಸ್ಟೇಡಿಯಂ, ಲೌಡೆರ್​ಹಿಲ್​

*ಗಯಾನಾ ನ್ಯಾಷನಲ್​ ಸ್ಟೇಡಿಯಂ, ಗಯಾನಾ

*ಕೆನ್ಸಿಂಗ್​ಟನ್​ ಓವಲ್​, ಬ್ರಿಜ್​ಟೌನ್​

*ವಿವ್​ ರಿಚರ್ಡ್ಸ್​ ಸ್ಟೇಡಿಯಂ, ನಾರ್ತ್​ಸೌಂಡ್​

*ಬ್ರಿಯಾನ್​ ಲಾರಾ ಕ್ರಿಕೆಟ್​ ಅಕಾಡೆಮಿ, ತರೌಬ

*ಆನೋರ್ಸ್​ ವೇಲ್​ ಗ್ರೌಂಡ್​, ಸೇಂಟ್​ ವಿನ್ಸೆಂಟ್​

*ಡರೇನ್​ ಸ್ಯಾಮ್ಮಿ ಸ್ಟೇಡಿಯಂ, ಗ್ರಾಸ್​ ಐಲೆಟ್​

ಅಮೆರಿಕದಲ್ಲಿ ಮೊದಲ ಐಸಿಸಿ ಟೂರ್ನಿ

ವೆಸ್ಟ್​ ಇಂಡೀಸ್​ ಈ ಮುನ್ನ 2010ರಲ್ಲಿ ಟಿ20 ವಿಶ್ವಕಪ್​ಗೆ ಆತಿಥ್ಯ ವಹಿಸಿತ್ತು. ಆದರೆ ಅಮೆರಿಕದಲ್ಲಿ ಇದು ಮೊಟ್ಟಮೊದಲ ಐಸಿಸಿ ಟೂರ್ನಿಯಾಗಿದೆ. ಭಾರತ ತಂಡ ಈ ಹಿಂದೆ ವಿಂಡೀಸ್​ ಪ್ರವಾಸ ಕೈಗೊಂಡಾಗ ಅಮೆರಿಕದ ಬೇಸ್​ಬಾಲ್​ ಮೈದಾನಗಳಲ್ಲಿ ಕೆಲ ಟಿ20 ಪಂದ್ಯಗಳನ್ನು ಆಡಿತ್ತು. 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ಗೆ ಈಗಾಗಲೆ ಟಿ20 ಪದಕ ಸ್ಪರ್ಧೆಯಾಗಿ ಸೇರ್ಪಡೆಯಾಗಿರುವುದರಿಂದ ಅಮೆರಿಕದಲ್ಲಿ ಕ್ರಿಕೆಟ್​ ಜನಪ್ರಿಯತೆ ಹೆಚ್ಚಿಸಲು ಈ ಟೂರ್ನಿ ಮಹತ್ವದ್ದಾಗಿದೆ.

2: ರೋಹಿತ್​ ಶರ್ಮ ಮತ್ತು ಬಾಂಗ್ಲಾದೇಶದ ಶಕೀಬ್​ ಅಲ್​ ಹಸನ್​ ಇದುವರೆಗಿನ ಎಲ್ಲ 9 ಟಿ20 ವಿಶ್ವಕಪ್​ಗಳಲ್ಲೂ ಆಡಿರುವ ಇಬ್ಬರು ಆಟಗಾರರಾಗಿದ್ದಾರೆ. ಈ ಪೈಕಿ ರೋಹಿತ್​ ಗರಿಷ್ಠ 39 ಪಂದ್ಯ ಆಡಿದ ದಾಖಲೆ ಹೊಂದಿದ್ದಾರೆ.

ಟಿ20 ವಿಶ್ವಕಪ್​ ಟಾಪರ್ಸ್​

*ಗರಿಷ್ಠ ರನ್​: ವಿರಾಟ್​ ಕೊಹ್ಲಿ (1,141)

*ಗರಿಷ್ಠ ವಿಕೆಟ್​: ಶಕೀಬ್​ ಅಲ್​ ಹಸನ್​ (47)

*ಗರಿಷ್ಠ ಗಳಿಕೆ: ಬ್ರೆಂಡನ್​ ಮೆಕ್ಕಲಂ (123)

*ವೇಗದ ಶತಕ: ಕ್ರಿಸ್​ ಗೇಲ್​ (47 ಎಸೆತ)

*ಗರಿಷ್ಠ ಸಿಕ್ಸರ್​: ಕ್ರಿಸ್​ ಗೇಲ್​ (63)

*ಬೆಸ್ಟ್​ ಬೌಲಿಂಗ್​: ಅಜಂತ ಮೆಂಡಿಸ್​ (8ಕ್ಕೆ 6)

*ಗರಿಷ್ಠ ಕ್ಯಾಚ್​: ಎಬಿ ಡಿವಿಲಿಯರ್ಸ್​ (23)

*ಗರಿಷ್ಠ ಮೊತ್ತ: ಶ್ರೀಲಂಕಾ (260/6)

6: ವೆಸ್ಟ್​ ಇಂಡೀಸ್​ ದ್ವೀಪ ಸಮೂಹದ 6 ದೇಶಗಳಾದ ಬಾರ್ಬಡೋಸ್​, ಗಯಾನಾ, ಆಂಟಿಗಾ&ರ್ಬಬುಡಾ, ಟ್ರಿನಿಡಾಡ್​-ಟೊಬಾಗೊ, ಸೇಂಟ್​ ಲೂಸಿಯಾ, ಸೇಂಟ್​ ವಿನ್ಸೆಂಟ್​ನಲ್ಲಿ ಪಂದ್ಯಗಳು ನಡೆಯಲಿವೆ.