ಕ್ರೀಡೆ

ಇಂದಿನಿಂದ ಯುಎಸ್​ ಓಪನ್​ ಟೆನಿಸ್​; 25ನೇ ಗ್ರಾಂಡ್​ ಸ್ಲಾಂ ಕನಸಿನಲ್ಲಿ ಜೋಕೊವಿಕ್​

ನ್ಯೂಯಾರ್ಕ್​: ವರ್ಷದ 4ನೇ ಹಾಗೂ ಅಂತಿಮ ಗ್ರಾಂಡ್​ ಸ್ಲಾಂ ಎನಿಸಿರುವ ಯುಎಸ್​ ಓಪನ್​ ಟೆನಿಸ್​ ಟೂರ್ನಿಗೆ ಸೋಮವಾರ ಚಾಲನೆ ದೊರೆಯಲಿದ್ದು, ಇತ್ತೀಚೆಗೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ಗೆದ್ದು ವೃತ್ತೀಜಿವನದ ಗೋಲ್ಡನ್​ ಸ್ಲಾಂ ಸಾಧಿಸಿರುವ ಸೆರ್ಬಿಯಾದ ತಾರೆ ನೊವಾಕ್​ ಜೋಕೊವಿಕ್​ ಪುರುಷರ ಸಿಂಗಲ್ಸ್​ನಲ್ಲಿ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದ್ದಾರೆ. ಮಹಿಳಾ ವಿಭಾಗದಲ್ಲಿ ಆತಿಥೇಯ ಅಮೆರಿಕದ ತಾರೆ ಕೋಕೋ ಗೌಫ್​ ತನ್ನ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿಯನ್ನು ಉಳಿಸಿಕೊಳ್ಳವ ನಿರೀಕ್ಷೆಯಲ್ಲಿದ್ದಾರೆ.

ಒಲಿಂಪಿಕ್ಸ್​ ಬಳಿಕ ಮೊದಲ ಬಾರಿಗೆ ಅಂಗಣದಲ್ಲಿ ಕಾಣಿಸಲಿರುವ 24 ಗ್ರಾಂಡ್​ ಸ್ಲಾಂ ಒಡೆಯ ಜೋಕೊವಿಕ್​, ಹಾಲಿ ಋತುವಿನ ಮೊದಲ ಹಾಗೂ ದಾಖಲೆಯ 25ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಇವರಿಗೆ ಅಗ್ರ ಶ್ರೇಯಾಂಕಿತ ಇಟಲಿಯ ಜನ್ನಿಕ್​ ಸಿನ್ನರ್​, ಸ್ಪೇನ್​ ಯುವ ತಾರೆ ಕಾಲೋರ್ಸ್​ ಅಲ್ಕರಾಜ್​ ಪ್ರಬಲ ಎದುರಾಳಿಗಳಾಗಿದ್ದಾರೆ. ಟೂರ್ನಿಯ ಎರಡನೇ ಶ್ರೇಯಾಂಕಿತ ಎನಿಸಿರುವ ಜೋಕೊವಿಕ್​ ಹಾಗೂ ಒಲಿಂಪಿಕ್ಸ್​ ರಜತ ವೀರ, 4 ಗ್ರಾಂಡ್​ ಸ್ಲಾಂ ಒಡೆಯ ಅಲ್ಕರಾಜ್​ ಫೈನಲ್​ಗೇರಿದರೆ ಮಾತ್ರ ಮುಖಾಮುಖಿಯಾಗುವಂಥ ಡ್ರಾ ಪಡೆದುಕೊಂಡಿದ್ದಾರೆ. ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಒಲಿಂಪಿಕ್ಸ್​ನಲ್ಲಿ ಸ್ವರ್ಣ ಬೇಟೆಯಾಡಿರುವ 37 ವರ್ಷದ ಜೋಕೊವಿಕ್​, 2023ರಲ್ಲಿ ಅಮೆರಿಕದಲ್ಲಿ ಕೊನೆಯದಾಗಿ ಗ್ರಾಂಡ್​ ಸ್ಲಾಂ ಕಿರೀಟ ಜಯಿಸಿದ್ದು, 2024ರ ಋತು ಜೋಕೋ ಪಾಲಿಗೆ ತುಸು ಕಠಿಣ ಎನಿಸಿದ್ದರೂ, ಐದನೇ ಬಾರಿಗೆ ಯುಎಸ್​ ಕಿರೀಟದ ತವಕದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಜೋಕೋ, ಮಾಲ್ಡೋವಾದ ರಾಡು ಆಲ್ಬೋಟ್​ ಎದುರು ಕಣಕ್ಕಿಳಿಯಲಿದ್ದಾರೆ. ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ, ಇಟಲಿಯ ಲೊರೆಂಜೊ ಮುಸೆಟ್ಟಿ, ಅಮೆರಿಕನ್​ ರೈಲಿ ಒಪೆಲ್ಕಾ ಎದುರು ಅಭಿಯಾನ ಆರಂಭಿಸಲಿದ್ದಾರೆ.

ವಿಂಬಲ್ಡನ್​ ಹಾಗೂ ಫ್ರೆಂಚ್​ ಓಪನ್​ ಚಾಂಪಿಯನ್​ 21 ವರ್ಷದ ಅಲ್ಕರಾಜ್​, ಆಸ್ಟ್ರೆಲಿಯನ್​ ಓಪನ್​ ಚಾಂಪಿಯನ್​ ಜನ್ನಿಕ್​ ಸಿನ್ನರ್​ ಸೆಮಿಫೈನಲ್​ನಲ್ಲಿ ಎದುರಾಗುವ ನಿರೀಕ್ಷೆ ಇದೆ. ಕ್ವಾರ್ಟರ್​ಫೈನಲ್​ನಲ್ಲಿ ಸಿನ್ನರ್​ ಹಾಗೂ 2021ರ ಚಾಂಪಿಯನ್​ ಡೇನಿಯಲ್​ ಮೆಡ್ವೆಡೆವ್​ ಎದುರಾದರೆ, ಜೋಕೊವಿಕ್​ಗೆ ವಿಶ್ವ ನಂ.6 ಆಂಡ್ರೆ ರುಬ್ಲೆವ್​, ಅಲ್ಕರಾಜ್​ಗೆ ವಿಶ್ವ ನಂ.7 ಹಬರ್ಟ ಹರ್ಕಾಜ್​ ಮತ್ತು 2020ರ ರನ್ನರ್​ ಅಪ್​ ಅಲೆಕ್ಸಾಂಡರ್​ ಜ್ವೆರೆವ್​ಗೆ, ಕ್ಯಾಸ್ಪರ್​ ರುಡ್​ ಮುಖಾಮುಖಿಯಾಗುವ ನಿರೀಕ್ಷೆ ಇದೆ. 2021ರ ಚಾಂಪಿಯನ್​ ರಷ್ಯಾದ ಡೇನಿಯಲ್​ ಮೆಡ್ವೆಡೇವ್​, ಆಂಡ್ರೆ ರುಬ್ಲೆವ್​, ಐದನೇ ಶ್ರೇಯಾಂಕಿತ ಸ್ಟಿಫಾನೋಸ್​ ಸಿಸಿಪಾಸ್​ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಹೊಸ ಚಾಂಪಿಯನ್​ಗೆ ಹಾದಿ...

ಋತುವಿನ ಅಂತಿಮ ಗ್ರಾಂಡ್​ ಸ್ಲಾಂನಲ್ಲಿ ಮಹಿಳಾ ಸಿಂಗಲ್ಸ್​ ಕಿರೀಟ ಜಯಿಸಲು ಪ್ರಮುಖ ಫೇವರಿಟ್​ ಆಟಗಾರ್ತಿಯನ್ನು ಹೆಸರಿಸುವುದು ಕಷ್ಟ ಎನಿಸಿದೆ. 2012ರಿಂದ 2023ರ ವರೆಗೂ ಪ್ರತಿ ಬಾರಿಯೂ ಹೊಸ ಚಾಂಪಿಯನ್​ ಉದಯಕ್ಕೆ ನ್ಯೂಯಾರ್ಕ್​ ಸಾಯಾಗಿದೆ. ಹಾಲಿ ಋತುವಿನಲ್ಲಿ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಕೋಕೋ ಗೌಫ್​ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದ್ದು, ಪ್ಯಾರಿಸ್​ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ ವಿಶ್ವ ನಂ.1 ಪೋಲೆಂಡ್​ನ ಸ್ವಿಯಾಟೆಕ್​ ಜತೆಗೆ ವಿಶ್ವ ನಂ.3 ಅರಿನಾ ಸಬಲೆಂಕಾ ಕಠಿಣ ಸವಾಲೊಡ್ಡುವ ನಿರೀೆ ಇದೆ. ಇವರಿಬ್ಬರು ವರ್ಷದ 2ನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಈ ವರ್ಷದ ವಿಂಬಲ್ಡನ್​ ಮತ್ತು ಫ್ರೆಂಚ್​ ರನ್ನರ್​ ಅಪ್​ ಇಟಲಿಯ ಜಾಸ್ಮಿನ್​ ಪಾವೋಲಿನಿ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿಯ ಗೆಲ್ಲುವ ಹಂಬಲದಲ್ಲಿದ್ದಾರೆ. ಎರಡು ಬಾರಿ ಚಾಂಪಿಯನ್​ ಜಪಾನ್​ನ ನವೋಮಿ ಒಸಾಕ, ಬ್ರಿಟನ್​ನ ಎಮ್ಮಾ ರಾಡುಕಾನು ಮರಳಿ ಕಣಕ್ಕಿಳಿಯಲಿದ್ದಾರೆ. ಕ್ವಾರ್ಟರ್​ಫೈನಲ್​ನಲ್ಲಿ ಇಗಾ ಸ್ವಿಯಾಟೆಕ್​- ವಿಶ್ವ ನಂ. 6 ಜೆಸ್ಸಿಕಾ ಪೆಗುಲಾ, ಸಬಲೆಂಕಾ ವಿರುದ್ಧ ಒಲಿಂಪಿಕ್​ ಚಿನ್ನದ ಪದಕ ವಿಜೇತೆ ಝೆಂಗ್​ ಕ್ವಿನ್ವೆನ್​, ಗೌಫ್​ ವಿರುದ್ಧ ಎರಡು ಗ್ರಾಂಡ್​ ಸ್ಲಾಂ ಚಾಂಪಿಯನ್​ ಬಾರ್ಬೊರಾ ಕ್ರೆಜ್ಸಿಕೋವಾ, 2022ರ ವಿಂಬಲ್ಡನ್​ ಚಾಂಪಿಯನ್​ ಎಲೆನಾ ರೈಬಾಕಿನಾಗೆ ಪಾವೋಲಿನಿ ಎದುರಾಗುವ ನಿರೀಕ್ಷೆ ಇದೆ.

ಆರಂಭ: ರಾತ್ರಿ 8.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​

ಬಹುಮಾನ ಮೊತ್ತ

ಟೂರ್ನಿಯ ಒಟ್ಟು ಬಹುಮಾನ ಮೊತ್ತ 628 ಕೋಟಿ ರೂ. (75 ದಶಲಕ್ಷ ಡಾಲರ್​) ಆಗಿದೆ. ಸಿಂಗಲ್ಸ್​ ವಿಭಾಗದ ವಿಜೇತರು 30.17 ಕೋಟಿ ರೂ. ಮತ್ತು ರನ್ನರ್​ಅಪ್​ 15.08 ಕೋಟಿ ರೂ. ಬಹುಮಾನ ಪಡೆಯಲಿದ್ದಾರೆ. ಸಿಂಗಲ್ಸ್​ ವಿಭಾಗದ ಮೊದಲ ಸುತ್ತಿನಲ್ಲಿ ಹೊರಬಿದ್ದರೂ 83.81 ಲಕ್ಷ ರೂ. ಬಹುಮಾನ ಲಭಿಸಲಿದೆ. ಪುರುಷ-ಮಹಿಳಾ ಡಬಲ್ಸ್​ ವಿಜೇತ ಜೋಡಿಗೆ 6.28 ಕೋಟಿ ರೂ. ಹಾಗೂ ಮಿಶ್ರ ಡಬಲ್ಸ್​ ವಿಭಾಗದ ವಿಜೇತ ಜೋಡಿಗೆ 1.67 ಕೋಟಿ ರೂ. ಬಹುಮಾನ ಲಭಿಸಲಿದೆ.

*7: ಜೋಕೊವಿಕ್​ ಈ ಸಲ ಯುಎಸ್​ ಓಪನ್​ ಗೆಲ್ಲದಿದ್ದರೆ, 7 ವರ್ಷಗಳ ಬಳಿಕ ವರ್ಷದಲ್ಲಿ ಒಂದೂ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲ್ಲದ ನಿರಾಸೆ ಅನುಭವಿಸಲಿದ್ದಾರೆ. ಜೋಕೋ 2017ರಲ್ಲಿ ಕೊನೆಯದಾಗಿ ಒಂದೂ ಗ್ರಾಂಡ್​ ಸ್ಲಾಂ ಗೆದ್ದಿರಲಿಲ್ಲ.

*25: ಜೋಕೋ ಪ್ರಶಸ್ತಿ ಗೆದ್ದರೆ ಸಿಂಗಲ್ಸ್​ ವಿಭಾಗದಲ್ಲಿ 25 ಗ್ರಾಂಡ್​ ಸ್ಲಾಂ ಜಯಿಸಿದ ಮೊದಲಿಗ ಎನಿಸಲಿದ್ದಾರೆ. ಸದ್ಯ ಆಸೀಸ್​ ಆಟಗಾರ್ತಿ ಮಾರ್ಗರೇಟ್​ ಕೋರ್ಟ್​ (24) ಜತೆಗೆ ಸಮಬಲದಲ್ಲಿದ್ದಾರೆ.

*5: ಜೋಕೊವಿಕ್​ ಪ್ರಶಸ್ತಿ ಗೆದ್ದರೆ ಮುಕ್ತ ಟೆನಿಸ್​ ಯುಗದಲ್ಲಿ ಗರಿಷ್ಠ 5 ಬಾರಿ ಯುಎಸ್​ ಓಪನ್​ ಗೆದ್ದ ಜಿಮ್ಮಿ ಕಾನರ್ಸ್​, ಪೀಟ್​ ಸಾಂಪ್ರಸ್​ ಮತ್ತು ರೋಜರ್​ ಫೆಡರರ್​ ದಾಖಲೆ ಸರಿಗಟ್ಟಲಿದ್ದಾರೆ.

ನಗಾಲ್​ಗೆ ಗ್ರೀಕ್​ಸ್ಪೂರ್​ ಎದುರಾಳಿ

ಭಾರತದ ಅಗ್ರ ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಮೊದಲ ಸುತ್ತಿನಲ್ಲಿ ವಿಶ್ವ ನಂ. 40 ನೆದರ್ಲೆಂಡ್​ ಆಟಗಾರ ಟ್ಯಾಲ್​ ಗ್ರೀಕ್​ಸ್ಪೂರ್​ ವಿರುದ್ಧ ಆಡಲಿದ್ದಾರೆ. ವಿಶ್ವ ನಂ. 72 ನಗಾಲ್​ಗಿಂತ ಗ್ರೀನ್​ಸ್ಪೂರ್​ ಉನ್ನತ ಶ್ರೇಯಾಂಕಿತನಾಗಿದ್ದರೂ, ಸದ್ಯ ಉತ್ತಮ ಲಯದಲ್ಲಿರುವ ನಗಾಲ್​ರಿಂದ ಸಕಾರಾತ್ಮಕ ಫಲಿತಾಂಶ ನಿರೀಸಬಹುದಾಗಿದೆ. ಡಬಲ್ಸ್​ನಲ್ಲಿ ರೋಹನ್​ ಬೋಪಣ್ಣ ಕಣಕ್ಕಿಳಿಯಲಿದ್ದಾರೆ.