ಕ್ರೀಡೆ

ಯುಎಸ್ ಓಪನ್ ಮುಂದೂಡಿಕೆ, ನಿಗದಿಯಂತೆ ವಿಂಬಲ್ಡನ್?: ಅನಿಶ್ಚಿತತೆ ಹರಡಿದ ಕರೊನಾ ಭೀತಿ

kumarvrl

ನ್ಯೂಯಾರ್ಕ್/ಲಂಡನ್/ಪ್ಯಾರಿಸ್: ಕರೊನಾ ವೈರಸ್ ಕಳವಳದಿಂದಾಗಿ ವರ್ಷದ 2ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್ ಮುಂದೂಡಿಕೆಯ ನಡುವೆ, ವರ್ಷದ ಇನ್ನೆರಡು ಗ್ರಾಂಡ್ ಸ್ಲಾಂ ಟೂರ್ನಿಗಳ ಬಗ್ಗೆಯೂ ಗೊಂದಲಗಳು ಮೂಡಿವೆ.

ಆಗಸ್ಟ್ 24ರಿಂದ ಸೆಪ್ಟೆಂಬರ್ 13ರವರೆಗೆ ನಡೆಯಬೇಕಿರುವ ಯುಎಸ್ ಓಪನ್ ಮುಂದೂಡಿಕೆಯ ಬಗ್ಗೆ ಅಮೆರಿಕದ ಟೆನಿಸ್ ಸಂಸ್ಥೆ (ಯುಎಸ್​ಟಿಎ) ಸುಳಿವು ನೀಡಿದೆ. ಮತ್ತೊಂದೆಡೆ, ಜೂನ್ 29ರಿಂದ ಜುಲೈ 12ರವರೆಗೆ ನಡೆಯಬೇಕಿರುವ ಪ್ರತಿಷ್ಠಿತ ವಿಂಬಲ್ಡನ್ ಚಾಂಪಿಯನ್​ಷಿಪ್ ನಿಗದಿಯಂತೆಯೇ ಸಾಗುವ ಬಗ್ಗೆ ಸಂಘಟಕರಾಗಿರುವ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರೊನಾ ಹರಡುವಿಕೆಯ ಅಪಾಯ ಕಡಿಮೆಯಾದರೆ ಖಂಡಿತವಾಗಿಯೂ ನಿಗದಿಯಂತೆಯೇ ವಿಂಬಲ್ಡನ್ ನಡೆಯಲಿದೆ. ಆದರೆ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ಆಟಗಾರರು ಮತ್ತು ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅದಕ್ಕೆ ಮುನ್ನ ಸರ್ಕಾರದ ಸಲಹೆ-ಸೂಚನೆಗಳನ್ನೂ ಪಡೆದುಕೊಳ್ಳಲಾಗುವುದು. ಸದ್ಯಕ್ಕೆ ಹಾಲಿ ವರ್ಷದ ಟೂರ್ನಿಯ ಯೋಜನೆಗಳಿಗೆ ಅಂಟಿಕೊಂಡಿದ್ದೇವೆ ಎಂದು ಅಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ ಮುಖ್ಯಸ್ಥ ರಿಚರ್ಡ್ ಲೂಯಿಸ್ ತಿಳಿಸಿದ್ದಾರೆ.

ಮತ್ತೊಂದೆಡೆ ಯುಎಸ್ ಓಪನ್ ಸಂಘಟಕರು ಟೂರ್ನಿ ಮುಂದೂಡಿಕೆಯ ಯೋಚನೆಯನ್ನು ಮುಕ್ತವಾಗಿಟ್ಟಿದ್ದಾರೆ. ಅಲ್ಲದೆ ಟೂರ್ನಿ ಮುಂದೂಡುವುದಾದರೆ, ಮುಂಬರುವ ದಿನಗಳಲ್ಲಿ ನಿಗದಿಯಾಗಿರುವ ಇತರ ಪ್ರಮುಖ ಟೂರ್ನಿಗಳ ಸಂಘಟಕರ ಜತೆಗೂ ರ್ಚಚಿಸುವುದಾಗಿ ತಿಳಿಸಿದ್ದಾರೆ. ‘ಸದ್ಯಕ್ಕೆ ಯುಎಸ್ ಓಪನ್ ಟೂರ್ನಿಯನ್ನು ನಿಗದಿಯಂತೆಯೇ ನಡೆಸುವ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಟೂರ್ನಿ ಮುಂದೂಡುವ ಬಗ್ಗೆ ಪರಿಶೀಲಿಸಲಿದ್ದೇವೆ’ ಎಂದು ಯುಎಸ್​ಟಿಎ ತಿಳಿಸಿದೆ.

ಮೇ 24ರಿಂದ ಜೂನ್ 7ರವರೆಗೆ ಪ್ಯಾರಿಸ್​ನಲ್ಲಿ ನಿಗದಿಯಾಗಿದ್ದ ಫ್ರೆಂಚ್ ಓಪನ್ ಟೂರ್ನಿ ಮಂಗಳವಾರವಷ್ಟೇ ಅಧಿಕೃತವಾಗಿ ಮುಂದೂಡಲ್ಪಟ್ಟಿತ್ತು. ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರವರೆಗೆ ಮರುನಿಗದಿಯಾಗಿರುವ ಫ್ರೆಂಚ್ ಓಪನ್ ಈಗ ವರ್ಷದ ಕೊನೆಯ ಗ್ರಾಂಡ್ ಸ್ಲಾಂ ಆಗಿ ಪರಿವರ್ತನೆಗೊಂಡಿದೆ. ಸದ್ಯ ಏಪ್ರಿಲ್ ಅಂತ್ಯದವರೆಗೆ ವಿಶ್ವದ ಎಲ್ಲ ಎಟಿಪಿ, ಡಬ್ಲ್ಯುಟಿಎ ಮತ್ತು ಐಟಿಎಫ್ ಟೂರ್ನಿಗಳು ರದ್ದುಗೊಂಡಿವೆ ಅಥವಾ ಮುಂದೂಡಿಕೆಯಾಗಿವೆ. -ಪಿಟಿಐ/ಏಜೆನ್ಸೀಸ್

ಫ್ರೆಂಚ್ ಓಪನ್ ಕಾದಾಟ ಮುಂದಕ್ಕೆ ಪ್ರಮುಖ ಆಟಗಾರರಿಗೆ ತಲೆನೋವು

ಫ್ರೆಂಚ್ ಓಪನ್ ಸಂಘಟಕರು ಸರಾಗವಾಗಿ ಟೂರ್ನಿ ಮುಂದೂಡಿರಬಹುದು. ಆದರೆ ಆಟಗಾರರಿಗೆ ಈ ಟೂರ್ನಿಯಲ್ಲಿ ಆಡುವುದು ಹಲವು ರೀತಿಯಲ್ಲಿ ಸವಾಲಾಗಿ ಪರಿಣಮಿಸಲಿದೆ. ಫ್ರೆಂಚ್ ಓಪನ್ ಆವೆ ಮಣ್ಣಿನ ಟೂರ್ನಿ. ಆದರೆ ಸೆಪ್ಟೆಂಬರ್-ಅಕ್ಟೋಬರ್​ಗೆ ಟೂರ್ನಿ ಮುಂದೂಡಿಕೆಯಾಗಿರುವುದರಿಂದ ಆಟಗಾರರು, ಹಾರ್ಡ್​ಕೋರ್ಟ್ ಟೂರ್ನಿಗಳ ನಡುವೆ ಕ್ಲೇ-ಕೋರ್ಟ್​ಗೆ ಹೊಂದಿಕೊಳ್ಳುವುದು ಕಷ್ಟ. ಇನ್ನು ಇದೇ ಸಮಯದಲ್ಲಿ ಲೆವರ್ ಕಪ್ ಟೀಮ್ ಚಾಂಪಿಯನ್​ಷಿಪ್ ನಿಗದಿಯಾಗಿದ್ದು, ಅಗ್ರ ಆಟಗಾರರಾದ ರೋಜರ್ ಫೆಡರರ್ ಮತ್ತು 12 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ರಾಫೆಲ್ ನಡಾಲ್ ಕೂಡ ಈ ಟೂರ್ನಿಯಲ್ಲಿ ಆಡುವ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಒಂದೋ ಪ್ರಮುಖ ಆಟಗಾರರು ಫ್ರೆಂಚ್ ಓಪನ್​ನಿಂದ ಹಿಂದೆ ಸರಿಯಬೇಕಾಗುತ್ತದೆ ಅಥವಾ ಲೆವರ್ ಕಪ್ ಮುಂದೂಡಬೇಕಾಗುತ್ತದೆ. ಇತರ ಟೂರ್ನಿಗಳ ಸಂಘಟಕರನ್ನು ಸಂರ್ಪಸದೆ, ಫ್ರೆಂಚ್ ಓಪನ್ ಸಂಘಟಕರು ಏಕಾಏಕಿ ನಿರ್ಧಾರ ಕೈಗೊಂಡಿರುವುದು ಟೀಕೆಗಳಿಗೆ ಗುರಿಯಾಗಿದೆ.