ಶುಭಮಾನ್​ ಗಿಲ್ ಬ್ಯಾಟಿಂಗ್ ಅಭ್ಯಾಸ ಏಜೆನ್ಸಿ
ಕ್ರೀಡೆ

ಇಂದಿನಿಂದ ಭಾರತಕ್ಕೆ ನ್ಯೂಜಿಲೆಂಡ್​ನಲ್ಲಿ ಟೆಸ್ಟ್​ ಸವಾಲು

ಟಿ20, ಏಕದಿನ ನಂತರ ಕಿವೀಸ್​ ನೆಲದಲ್ಲಿ ಮತ್ತೊಂದು ಸರಣಿ ಗೆಲುವಿನ ತವಕ

ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ ನೆಲದಲ್ಲಿ ಟಿ20 ಮತ್ತು ಏಕದಿನ ಸರಣಿಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಬಳಿಕ ಭಾರತ ತಂಡವೀಗ ಟೆಸ್ಟ್​ ಸರಣಿಯಲ್ಲೂ ಜಯಿಸಿ ಕ್ಲೀನ್​ಸ್ವೀಪ್​ ಸಾಧಿಸುವ ತವಕದಲ್ಲಿದೆ. ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿಗೆ ಗುರುವಾರ ಬೇಸಿನ್​ ರಿಸರ್ವ್​ ಮೈದಾನದಲ್ಲಿ ಚಾಲನೆ ಸಿಗಲಿದೆ. ಶುಭಮಾನ್​ ಗಿಲ್​ ಬಳಗಕ್ಕೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ಗೇರುವ ಆಸೆ ಜೀವಂತವಿಟ್ಟುಕೊಳ್ಳುವ ನಿಟ್ಟಿನಲ್ಲಿ ಇದು ಮಹತ್ವದ ಸರಣಿಯಾಗಿದೆ. ಜತೆಗೆ 2024ರಲ್ಲಿ ತವರಿನಲ್ಲಿ ಕಿವೀಸ್​ ಎದುರು ಅನುಭವಿಸಿದ್ದ ಟೆಸ್ಟ್​ ಸರಣಿ ಸೋಲಿಗೂ ಸೇಡು ತೀರಿಸಿಕೊಳ್ಳುವ ಅವಕಾಶ ಟೀಮ್​ ಇಂಡಿಯಾ ಮುಂದಿದೆ.

ನ್ಯೂಜಿಲೆಂಡ್​ ತಂಡ ಟಿ20, ಏಕದಿನ ಸರಣಿಯಲ್ಲಿ ಸೋತಿದ್ದರೂ, ಟೆಸ್ಟ್​ ಸರಣಿಯಲ್ಲಿ ಫೇವರಿಟ್​ ಆಗಿಯೇ ಕಣಕ್ಕಿಳಿಯಲಿದೆ. ಇಂಗ್ಲೆಂಡ್​ನಲ್ಲಿ ಆಡಿದ ಕೊನೇ ಟೆಸ್ಟ್​ ಸರಣಿಯಲ್ಲಿ 2-1ರಿಂದ ಗೆದ್ದಿರುವುದು ಇದಕ್ಕೆ ಪ್ರಮುಖ ಕಾರಣ. ಜತೆಗೆ ಹಾಲಿ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲೂ ಕಿವೀಸ್​ ಸದ್ಯ ಅಗ್ರಸ್ಥಾನದಲ್ಲಿದೆ. ಇನ್ನು ಭಾರತ ತಂಡದಲ್ಲಿ ರಿಷಭ್​ ಪಂತ್​ ಹೊರತಾಗಿ ಎಲ್ಲ ಬ್ಯಾಟರ್​ಗಳು ಇದೇ ಮೊದಲ ಬಾರಿಗೆ ಕಿವೀಸ್​ ನೆಲದಲ್ಲಿ ಟೆಸ್ಟ್​ ಆಡಲಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್​ ನೆಲದಲ್ಲಿ ತೋರಿದ ನಿರ್ವಹಣೆಯನ್ನೇ ಭಾರತೀಯ ಬ್ಯಾಟರ್​ಗಳು ಪುನರಾವರ್ತಿಸಿದರೆ ಕಿವೀಸ್​ಗೂ ಸೆಡ್ಡು ಹೊಡೆಯಬಹುದು.

ಸರಣಿಯಲ್ಲಿ ಉಭಯ ತಂಡಗಳ ವೇಗಿಗಳ ಸಮರವನ್ನೂ ನಿರೀಸಲಾಗಿದೆ. ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ವೈಟ್​ಬಾಲ್​ ಸರಣಿಯಲ್ಲಿ ಮಿಂಚಿದ ಗುರ್ನೂರ್​ ಬ್ರಾರ್​, ಅಂಶುಲ್​ ಕಂಬೋಜ್​ ಹಾಜರಿಯಿಂದ ಭಾರತ ಕೂಡ ಬಲಿಷ್ಠ ವೇಗದ ಬೌಲಿಂಗ್​ ಪಡೆ ಹೊಂದಿದ್ದರೆ, ಮ್ಯಾಟ್​ ಹೆನ್ರಿ, ಜೇಮಿಸನ್​, ನಾಥನ್​ ಸ್ಮಿತ್​, ಜೇಕಬ್​ ಡಫಿ ಭಾರತೀಯ ಬ್ಯಾಟರ್​ಗಳನ್ನು ಕಂಗೆಡಿಸಲು ಸಜ್ಜಾಗಿದ್ದಾರೆ.

2009ರಲ್ಲಿ ಕಿವೀಸ್​ ನೆಲದಲ್ಲಿ ಕಂಡ ಕೊನೇ ಟೆಸ್ಟ್​ ಸರಣಿ ಗೆಲುವಿನಲ್ಲಿ ಆರಂಭಿಕ ಬ್ಯಾಟರ್​ ಆಗಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಗೌತಮ್​ ಗಂಭೀರ್​ಗೆ ಈಗ ಮುಖ್ಯ ಕೋಚ್​ ಆಗಿ ತನ್ನ ವರ್ಚಸ್ಸು ವೃದ್ಧಿಸಿಕೊಳ್ಳಲು ಇದು ಮಹತ್ವದ ಸರಣಿಯಾಗಿದೆ.

ಟೀಮ್​ ನ್ಯೂಸ್​:

ಭಾರತ: ಅಗ್ರ 6 ಕ್ರಮಾಂಕ ಖಚಿತವಿದೆ. 7ನೇ ಕ್ರಮಾಂಕದಲ್ಲಿ ಜಡೇಜಾ ಆಡುವ ಸಾಧ್ಯತೆ ಹೆಚ್ಚಿದ್ದರೂ, ಕಿವೀಸ್​ನ ಅಗ್ರ ನಾಲ್ವರು ಎಡಗೈ ಬ್ಯಾಟರ್​ಗಳಾಗಿರುವುದರಿಂದ, ಆ್​ ಸ್ಪಿನ್ನರ್​ ವಾಷಿಂಗ್ಟನ್​ ಸುಂದರ್​ ಆಡಿಸುವ ಲೆಕ್ಕಾಚಾರವೂ ಇದೆ. ನಾಲ್ವರು ವೇಗಿಗಳನ್ನು ಆಡಿಸುವೆವು ಎಂದು ನಾಯಕ ಗಿಲ್​ ಈಗಾಗಲೆ ಘೋಷಿಸಿದ್ದಾರೆ. ಈ ಪೈಕಿ ಬುಮ್ರಾ, ಸಿರಾಜ್​ ಸ್ಥಾನ ಖಚಿತವಿದೆ. 3ನೇ ವೇಗದ ಬೌಲರ್​ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧಕೃಷ್ಣ ಮತ್ತು ಏಕದಿನ ಸರಣಿಯಲ್ಲಿ ಮಿಂಚಿದ ಗುರ್ನೂರ್​ ಸ್ಪರ್ಧೆಯಲ್ಲಿದ್ದರೆ, 4ನೇ ವೇಗದ ಬೌಲರ್​ ಸ್ಥಾನಕ್ಕೆ ಆಲ್ರೌಂಡರ್​ ನಿತೀಶ್​ ರೆಡ್ಡಿ ಜತೆಗೆ ಅಂಶುಲ್​ ಕಂಬೋಜ್​ ಮತ್ತು ಬ್ಯಾಟಿಂಗ್​ನಲ್ಲೂ ಮಿಂಚಬಲ್ಲ ಆಕಾಶ್​ ದೀಪ್​ ಪೈಪೋಟಿಯಲ್ಲಿದ್ದಾರೆ.

ಸಂಭಾವ್ಯ ತಂಡ: ಜೈಸ್ವಾಲ್​, ರಾಹುಲ್​, ಪಡಿಕ್ಕಲ್​, ಗಿಲ್​ (ನಾಯಕ), ಪಂತ್​ (ವಿ.ಕೀ), ಜುರೆಲ್​, ಜಡೇಜಾ/ವಾಷಿಂಗ್ಟನ್​, ನಿತೀಶ್​ ರೆಡ್ಡಿ/ಕಂಬೋಜ್​/ಆಕಾಶ್​ದೀಪ್​, ಬುಮ್ರಾ, ಸಿರಾಜ್​, ಪ್ರಸಿದ್ಧಕೃಷ್ಣ/ಗುರ್ನೂರ್​.

ನ್ಯೂಜಿಲೆಂಡ್​: ಕಾನ್​ವೇ, ರಚಿನ್​ ರವೀಂದ್ರ ಫಿಟ್​ ಆಗಿರುವುದರಿಂದ ಕಿವೀಸ್​ ಕೂಡ ಅಗ್ರ 6 ಕ್ರಮಾಂಕದ ಖಚಿತತೆಯಲ್ಲಿದೆ. ಸ್ಯಾಂಟ್ನರ್​ ಗಾಯದಿಂದ ಅಲಭ್ಯರಾಗಿರುವುದರಿಂದ ಗ್ಲೆನ್​ ಫಿಲಿಪ್ಸ್​ ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಆಗಿ 7ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಲ್ವರು ವೇಗಿಗಳ ಪೈಕಿ ಮ್ಯಾಟ್​ ಹೆನ್ರಿ, ಜೇಮಿಸನ್​ ಮತ್ತು ನಾಥನ್​ ಸ್ಮಿತ್​ ಸ್ಥಾನ ಖಚಿತವಿದೆ. 4ನೇ ವೇಗದ ಬೌಲರ್​ ಸ್ಥಾನಕ್ಕೆ ಜೇಕಬ್​ ಡಫಿ ಮತ್ತು ಬ್ಲೇರ್​ ಟಿಕ್ನರ್​ ಪೈಪೋಟಿಯಲ್ಲಿದ್ದಾರೆ.

ಸಂಭಾವ್ಯ ತಂಡ: ಲಾಥಮ್​ (ನಾಯಕ), ಕಾನ್​ವೇ, ನಿಕೋಲ್ಸ್​, ರಚಿನ್​, ಡೆರಿಲ್​ ಮಿಚೆಲ್​, ಬ್ಲಂಡೆಲ್​ (ವಿ.ಕೀ), ಫಿಲಿಪ್ಸ್​, ನಾಥನ್​ ಸ್ಮಿತ್​, ಜೇಮಿಸನ್​, ಹೆನ್ರಿ, ಡಫಿ/ಟಿಕ್ನರ್​.

*ಆರಂಭ: ಮುಂಜಾನೆ 3.30

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​.

ಮುಖಾಮುಖಿ: 65

ಭಾರತ: 22

ನ್ಯೂಜಿಲೆಂಡ್​: 16

ಡ್ರಾ: 27

ನ್ಯೂಜಿಲೆಂಡ್​ನಲ್ಲಿ: 25

ಭಾರತ: 5

ನ್ಯೂಜಿಲೆಂಡ್​: 10

ಡ್ರಾ: 10

3ನೇ ಬಾರಿ ಸರಣಿ ಗೆಲುವಿನ ಕನಸು

ಭಾರತ ತಂಡ ನ್ಯೂಜಿಲೆಂಡ್​ ನೆಲದಲ್ಲಿ 11ನೇ ಬಾರಿ ಟೆಸ್ಟ್​ ಸರಣಿ ಆಡಲಿದೆ. ಈ ಹಿಂದಿನ 10 ಸರಣಿಗಳಲ್ಲಿ ಎರಡರಲ್ಲಿ ಗೆದ್ದಿರುವ ಭಾರತ, ಆರರಲ್ಲಿ ಸೋಲುಂಡಿದೆ. ಎರಡರಲ್ಲಿ ಸಮಬಲ ಸಾಧಿಸಿದೆ. 1967-68ರ ಮೊಟ್ಟಮೊದಲ ನ್ಯೂಜಿಲೆಂಡ್​ ಪ್ರವಾಸದ ಟೆಸ್ಟ್​ ಸರಣಿಯಲ್ಲಿ 3-1ರಿಂದ ಗೆದ್ದಿದ್ದ ಭಾರತ ಬಳಿಕ 2008-09ರಲ್ಲಿ ಧೋನಿ ಸಾರಥ್ಯದಲ್ಲಿ 41 ವರ್ಷಗಳ ಬಳಿಕ 2ನೇ ಬಾರಿ ಸರಣಿ ಜಯಿಸಿತ್ತು. ಆಗ ಸರಣಿಯ 2ನೇ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಬರೋಬ್ಬರಿ 436 ಎಸೆತ ಆಡಿ ಭಾರತದ ಸೋಲು ತಪ್ಪಿಸಿ ಸರಣಿ ಗೆಲುವಿಗೆ ನೆರವಾಗಿದ್ದ ಗೌತಮ್​ ಗಂಭೀರ್​ ಈಗ ತಂಡದ ಮುಖ್ಯ ಕೋಚ್​ ಆಗಿದ್ದಾರೆ. ಈ ಬಾರಿ ಭಾರತ 17 ವರ್ಷಗಳ ಬಳಿಕ ಕಿವೀಸ್​ ನೆಲದಲ್ಲಿ ಸರಣಿ ಜಯಿಸುವ ಕನಸಿನಲ್ಲಿದೆ. 2008&09ರ ನಂತರದಲ್ಲಿ ಕಿವೀಸ್​ ನೆಲದಲ್ಲಿ ಆಡಿದ 2 ಟೆಸ್ಟ್​ ಸರಣಿಗಳಲ್ಲೂ ಭಾರತ ಸೋತಿತ್ತು.

ಡಬ್ಲ್ಯುಟಿಸಿ ಫೈನಲ್​ ಲೆಕ್ಕಾಚಾರ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 2025-27ರ ಸಾಲಿನ ಅಂಕಪಟ್ಟಿಯಲ್ಲಿ ಭಾರತ ಸದ್ಯ ಶೇ.51.52 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಈ ಸರಣಿಯ 2 ಪಂದ್ಯಗಳ ಬಳಿಕ ಭಾರತ ಮುಂದಿನ ವರ್ಷಾರಂಭದಲ್ಲಿ ತವರಿನಲ್ಲಿ ಆಸೀಸ್​ ವಿರುದ್ಧ 5 ಟೆಸ್ಟ್​ ಆಡಲಿದೆ. ಈ ಉಳಿದ 7ರಲ್ಲಿ ಎಲ್ಲದರಲ್ಲೂ ಗೆದ್ದರೆ ಭಾರತ ಶೇ.70.37 ಅಂಕಗಳೊಂದಿಗೆ ಫೈನಲ್​ಗೇರುವ ಅವಕಾಶ ಹೆಚ್ಚಿದೆ. 6 ಜಯ, 1 ಡ್ರಾ ಕಂಡರೆ ಶೇ.66.67 ಅಂಕದೊಂದಿಗೆ ಇತರ ಫಲಿತಾಂಶಗಳನ್ನೂ ಅವಲಂಬಿಸಬೇಕಾಗುತ್ತದೆ. 6ರಲ್ಲಿ ಗೆದ್ದು, 1ರಲ್ಲಿ ಸೋತರೆ ಶೇ.64.81 ಅಂಕದೊಂದಿಗೆ ಕ್ಷೀಣ ಅವಕಾಶ ಹೊಂದಿರಲಿದೆ. ನ್ಯೂಜಿಲೆಂಡ್​ (ಶೇ.72.22) ಸದ್ಯ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್​ ದಕ್ಷಿಣ ಆಫ್ರಿಕಾ (ಶೇ.71.43) ಮತ್ತು ಆಸ್ಟ್ರೆಲಿಯಾ (ಶೇ.69.23) ನಂತರದಲ್ಲಿವೆ. ಕಿವೀಸ್​ಗೆ ಹಾಲಿ ಆವೃತ್ತಿಯಲ್ಲಿ ಇನ್ನು 10 ಟೆಸ್ಟ್​ ಬಾಕಿ ಇದ್ದು, ಫೈನಲ್​ಗೇರಲು ಕನಿಷ್ಠ 7ರಲ್ಲಿ ಗೆಲ್ಲಬೇಕಿದೆ. ಆಸೀಸ್​ ವಿರುದ್ಧದ ತವರಿನ ಸರಣಿ ಗೆಲುವಿನ ಬಳಿಕ ದಣ ಆಫ್ರಿಕಾ ಫೈನಲ್​ಗೇರುವ ನೆಚ್ಚಿನ ತಂಡವೆನಿಸಿದೆ. ಆಸೀಸ್​ಗೆ ಭಾರತ ವಿರುದ್ಧದ ಸರಣಿ ನಿರ್ಣಾಯಕವಾಗಲಿದೆ.

*8: ಭಾರತ ತಂಡ ವೆಲ್ಲಿಂಗ್ಟನ್​ನಲ್ಲಿ ಇದುವರೆಗೆ 8 ಟೆಸ್ಟ್​ ಆಡಿದ್ದು, 5ರಲ್ಲಿ ಸೋತು, 2ರಲ್ಲಿ ಡ್ರಾ ಸಾಧಿಸಿದೆ. 1968ರಲ್ಲಿ ಏಕಮಾತ್ರ ಟೆಸ್ಟ್​ ಜಯಿಸಿದೆ. ಕಿವೀಸ್​ ಇಲ್ಲಿ ಆಡಿರುವ 70 ಟೆಸ್ಟ್​ಗಳಲ್ಲಿ 24ರಲ್ಲಿ ಗೆದ್ದು, 22ರಲ್ಲಿ ಸೋತಿದೆ. 24ರಲ್ಲಿ ಡ್ರಾ ಸಾಧಿಸಿದೆ.

ಪಿಚ್​ ರಿಪೋರ್ಟ್​

ಬೇಸಿನ್​ ರಿಸರ್ವ್​ ಮೈದಾನ ಟೆಸ್ಟ್​ ಪಂದ್ಯಕ್ಕೆ ಯಾವಾಗಲೂ ಹಸಿರು ಪಿಚ್​ ಹೊಂದಿರುತ್ತದೆ. ಆದರೆ ಕೆಲವೊಮ್ಮೆ ಇದು ಮೊದಲ ಅವಧಿಯ ಬಳಿಕ ಫ್ಲ್ಯಾಟ್ ಪಿಚ್​ನಂತೆ ವರ್ತಿಸುತ್ತದೆ. ಸಾಮಾನ್ಯವಾಗಿ ಪಂದ್ಯದ ಮೊದಲ 2 ದಿನ ಬೌಲರ್​ಗಳಿಗೆ ಹೆಚ್ಚಿನ ಸಹಕಾರ ನೀಡುತ್ತದೆ. ಹೀಗಾಗಿ ಉಭಯ ತಂಡಗಳ ಮೊದಲ ಇನಿಂಗ್ಸ್​ ಪಂದ್ಯದ ಲಿತಾಂಶದಲ್ಲಿ ನಿರ್ಣಾಯಕವೆನಿಸುತ್ತದೆ. ವೆಲ್ಲಿಂಗ್ಟನ್​ನಲ್ಲಿ ಗಾಳಿ ಹೆಚ್ಚಿರುವುದು ಕೂಡ ಬ್ಯಾಟರ್​ಗಳಿಗೆ ಹೆಚ್ಚಿನ ಸವಾಲೊಡ್ಡುತ್ತದೆ. ಪಂದ್ಯದ ಕೊನೇ 2 ದಿನ ಮೋಡ ಕವಿದ ವಾತಾವರಣ ಇರಲಿದ್ದರೂ, ಮಳೆ ಕಾಡುವ ಭೀತಿ ಇಲ್ಲ.

9: ಭಾರತದ ಗರಿಷ್ಠ ಟೆಸ್ಟ್​ ವಿಕೆಟ್​ ಸಾಧಕ ಬೌಲರ್​ಗಳ ಪಟ್ಟಿಯಲ್ಲಿ ಬುಮ್ರಾ (234) ಸದ್ಯ 11ನೇ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ಅವರು ಕನ್ನಡಿಗರಾದ ಜಾವಗಲ್​ ಶ್ರೀನಾಥ್​ (236) ಮತ್ತು ಬಿಎಸ್​ ಚಂದ್ರಶೇಖರ್​ರನ್ನು (242) ಹಿಂದಿಕ್ಕಿ 9ನೇ ಸ್ಥಾನಕ್ಕೇರುವ ಅವಕಾಶ ಹೊಂದಿದ್ದಾರೆ.