ಕ್ರೀಡೆ

PHOTO: ಕಿರಿಯರ ಕ್ರಿಕೆಟ್ ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಂದ್ ವಿವಾಹ

ನವದೆಹಲಿ: 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ನಾಯಕ ಉನ್ಮುಕ್ತ್ ಚಂದ್, ಕ್ರೀಡಾ ನ್ಯೂಟ್ರಿಷನಿಸ್ಟ್ ಸಿಮ್ರಾನ್ ಕೋಸ್ಲಾ ಅವರನ್ನು ಭಾನುವಾರ ವಿವಾಹವಾದರು. ಅವರು ಈ ವಿಷಯವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

‘ಎಂದೆಂದೂ ಜತೆಯಾಗಿರಲು ನಾವಿಂದು ನಿರ್ಧರಿಸಿದೆವು: 21.11.21’ ಎಂದು 28 ವರ್ಷದ ಉನ್ಮುಕ್ತ್ ಚಂದ್ ಟ್ವೀಟಿಸಿದ್ದಾರೆ. ಜತೆಗೆ ವಿವಾಹದ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ. ಉನ್ಮುಕ್ತ್ ಚಂದ್ ಸಾರಥ್ಯದ ಭಾರತ ತಂಡ 2012ರಲ್ಲಿ ಕಿರಿಯರ ವಿಶ್ವಕಪ್ ಜಯಿಸಿತ್ತು. ಬಳಿಕ ಅವರನ್ನು ‘ಭವಿಷ್ಯದ ವಿರಾಟ್ ಕೊಹ್ಲಿ’ ಎಂದೂ ಬಣ್ಣಿಸಲಾಗಿತ್ತು. ಆದರೆ ನಿರೀಕ್ಷೆಯ ಮಟ್ಟಕ್ಕೇರಲು ಅವರು ಶಕ್ತರಾಗಿರಲಿಲ್ಲ.

ಉನ್ಮುಕ್ತ್ ಚಂದ್ ಈ ವರ್ಷ ಅತ್ಯಂತ ಕಿರಿಯ ವಯಸ್ಸಿನಲ್ಲೇ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಮೆರಿಕದಲ್ಲಿ ಹೊಸ ಕ್ರಿಕೆಟ್ ವೃತ್ತಿಜೀವನವನ್ನು ಕಂಡುಕೊಳ್ಳುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿದ್ದರು. ಮುಂದಿನ ಬಿಗ್ ಬಾಷ್ ಲೀಗ್‌ನಲ್ಲಿ ಅವರು ಆಡಲಿದ್ದು, ಆಸ್ಟ್ರೇಲಿಯಾದ ಈ ಟಿ20 ಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಪುರುಷ ಕ್ರಿಕೆಟಿಗ ಎನಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರು ದೆಹಲಿ ಮತ್ತು ಉತ್ತರಾಖಂಡ ಪರ ಆಡಿದ್ದರೆ, ಐಪಿಎಲ್‌ನಲ್ಲಿ ಡೆಲ್ಲಿ, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪ್ರತಿನಿಧಿಸಿದ್ದರು.