ಕ್ರೀಡೆ

ಬಿಗ್‌ಬಾಷ್ ಲೀಗ್‌ನಲ್ಲಿ ಆಡುತ್ತಿರುವ ಭಾರತದ ಮೊದಲ ಕ್ರಿಕೆಟಿಗ ಯಾರು ಗೊತ್ತೇ?

ಮೆಲ್ಬೋರ್ನ್: 2012ರ 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್, ಆಸ್ಟ್ರೇಲಿಯಾದ ಬಿಗ್‌ಬಾಷ್ ಟಿ20 ಲೀಗ್‌ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಪರ ಕಣಕ್ಕಿಳಿದರು. ಈ ಮೂಲಕ ಬಿಗ್‌ಬಾಷ್‌ನಲ್ಲಿ ಆಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. 28 ವರ್ಷದ ಬಲಗೈ ಬ್ಯಾಟರ್ ಉನ್ಮುಕ್ತ್ ಚಂದ್, ಬಿಬಿಎಲ್‌ನಲ್ಲಿ ಹೋಬರ್ಟ್ ಹುರಿಕೇನ್ಸ್ ವಿರುದ್ಧ ಮೊದಲ ಪಂದ್ಯವಾಡಿದರು.

‘ಹೊಸ ಬಣ್ಣದ ಜೆರ್ಸಿ, ನಿಮಗೆ ಸರಿಯಾಗಿ ಹೊಂದುತ್ತದೆ’ ಎಂದು ರೆನೆಗೇಡ್ಸ್ ತಂಡ ಉನ್ಮುಕ್ತ್ ಫೋಟೋ ಸಹಿತ ಟ್ವೀಟ್ ಮಾಡಿದೆ. 2012ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲುವಿನಲ್ಲಿ ಉನ್ಮುಕ್ತ್ ಪ್ರಮುಖ ಪಾತ್ರವಹಿಸಿದ್ದರು. ವಿದೇಶಿ ಲೀಗ್‌ಗಳಲ್ಲಿ ಆಡುವ ಸಲುವಾಗಿ ಉನ್ಮುಕ್ತ್ ಚಂದ್, ಕಳೆದ ಆಗಸ್ಟ್‌ನಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 19 ವಯೋಮಿತಿಯಲ್ಲಿ ಆಡಿದ ಬಳಿಕ ಭಾರತ ಎ ಹಾಗೂ ದೆಹಲಿ ತಂಡಗಳ ಪರ ಆಡಿದ್ದ ಉನ್ಮುಕ್ತ್ ಚಂದ್, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.